ಸಾರಾಂಶ
ಕಾರವಾರ: ಜಿಲ್ಲೆಯು ಗಣೇಶೋತ್ಸವಕ್ಕೆ ಅಣಿಯಾಗುತ್ತಿದೆ. ಕಲಾವಿದರ ಕೈಚಳಕದಲ್ಲಿ ಜೇಡಿಮಣ್ಣಿನ ಗಣಪ ಮೈದಳೆಯುತ್ತಿದ್ದಾನೆ. ಸಾರ್ವಜನಿಕ ಗಣೇಶೋತ್ಸವದ ಮಂಟಪಗಳು ಸಿದ್ಧವಾಗುತ್ತಿವೆ. ಮಾರುಕಟ್ಟೆಗಳಲ್ಲೂ ಗಣಪತಿ ಮಂಟಪದ ಅಲಂಕಾರಿಕ ವಸ್ತುಗಳು, ವಿದ್ಯುದ್ದೀಪಗಳ ಮಾರಾಟ ಆರಂಭವಾಗಿದೆ. ಕಾರವಾರದಲ್ಲಿ ಗುಮಟೆಪಾಂಗ್ ಮಾರಾಟ ನಡೆಯುತ್ತಿದೆ. ಗಣಪತಿ ಎದುರು ಗುಮಟೆ ಬಾರಿಸುತ್ತ ಭಜನೆ ಮಾಡುವುದು ವಿಶೇಷವಾಗಿದೆ. ಸಾರ್ವಜನಿಕ ಗಣೋಶೋತ್ಸವ ಚೌತಿಯ ವಿಶೇಷ ಆಕರ್ಷಣೆ. ಜಿಲ್ಲೆಯಲ್ಲಿ 1400ರಷ್ಟು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತದೆ. ಯುವಕ ಮಂಡಳಗಳು, ಗಣೇಶೋತ್ಸವ ಸಮಿತಿಗಳು ಭರದಿಂದ ಮಂಟಪಗಳನ್ನು ನಿರ್ಮಿಸುವುದರಲ್ಲಿ ತೊಡಗಿಕೊಂಡಿವೆ.ಜಿಲ್ಲೆಯಲ್ಲಿ ಜೇಡಿಮಣ್ಣಿನಿಂದ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುವುದು ವಿಶೇಷ. ಇಲ್ಲಿ ಸಾಂಪ್ರದಾಯಿಕವಾಗಿ ಪರಿಸರಸ್ನೇಹಿ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಂತಹ ಮಾಲಿನ್ಯಕರ ಗಣಪತಿ ಮೂರ್ತಿಗಳು ಜಿಲ್ಲೆಯಲ್ಲಿ ಬಹು ವಿರಳವಾಗಿದೆ. ಸರ್ಕಾರ ಅಂತಹ ಮೂರ್ತಿಗಳನ್ನು ನಿರ್ಬಂಧಿಸಿದೆ. ಹೊನ್ನಾವರ ತಾಲೂಕಿನ ಕೆಕ್ಕಾರ ಜಿ.ಡಿ. ಭಟ್ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಎತ್ತಿದ ಕೈ. ಪ್ರಸಿದ್ಧ ಕಲಾವಿದರಾದ ಇವರು ತಯಾರಿಸಿದ ಗಣಪತಿ ಮೂರ್ತಿಗಳನ್ನು ನೋಡಲೆಂದೆ ವಿವಿಧೆಡೆಯಿಂದ ಜನತೆ ಕೆಕ್ಕಾರ ಮಠಕ್ಕೆ ಆಗಮಿಸುತ್ತಾರೆ. ನೂರಾರು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಕರ್ಕಿಯ ಭಂಡಾರಿ ಮನೆತನದವರು ಪ್ರತಿವರ್ಷ ಆಕರ್ಷಕ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಹೀಗೆ ಗಣಪತಿ ಮೂರ್ತಿಗಳನ್ನು ತಯಾರಿಸುವ ನೂರಾರು ಕುಟುಂಬಗಳು ಜಿಲ್ಲೆಯಲ್ಲಿವೆ. ಅವರೆಲ್ಲ ಈಗ ತುಂಬ ಬ್ಯುಸಿಯಾಗಿದ್ದಾರೆ. ಮನೆ ಮನೆಗಳಲ್ಲೂ ಚಕ್ಕುಲಿ, ವಡೆ, ಅತಿರಸ ಹೀಗೆ ಚೌತಿಗೆ ಬೇಕಾದ ತಿಂಡಿ ತಯಾರಿಕೆಯಲ್ಲಿ ಮಗ್ನರಾಗಿರುವುದು ಕಾಣಿಸುತ್ತಿದೆ.
ಸಂಭ್ರಮಕ್ಕೆ ಪ್ರಾಕೃತಿಕ ವಿಕೋಪಗಳ ಬ್ರೇಕ್ಈ ಬಾರಿ ಶಿರೂರು ಗುಡ್ಡ ಕುಸಿತ ದುರಂತದಿಂದ 11 ಜನರು ಕಣ್ಮರೆಯಾಗಿದ್ದರೆ ಅವರಲ್ಲಿ 8 ಜನರ ಮೃತದೇಹ ಮಾತ್ರ ದೊರಕಿದೆ. ಇನ್ನೂ ಮೂವರಿಗಾಗಿ ಶೋಧ ಕಾರ್ಯ ನಡೆಯಬೇಕಾಗಿದೆ. ಜತೆಗೆ ಕರಾವಳಿ, ಘಟ್ಟದ ಮೇಲಿನ ತಾಲೂಕುಗಳಲ್ಲಿ ಪ್ರವಾಹದಿಂದ ನೂರಾರು ಮನೆಗಳು ಕುಸಿದಿವೆ. 80ರಷ್ಟು ಜನತೆ ಇನ್ನೂ ಕಾಳಜಿ ಕೇಂದ್ರಗಳಲ್ಲಿದ್ದಾರೆ. ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಇದರಿಂದ ಈ ಬಾರಿಯ ಚೌತಿಯ ಸಂಭ್ರಮಕ್ಕಿಂತ ಇವರಿಗೆ ಬದುಕು ಕಟ್ಟಿಕೊಳ್ಳುವುದು ಹೇಗೆಂಬ ಚಿಂತೆ ಕಾಡುತ್ತಿದೆ. ಪ್ರಾಕೃತಿಕ ವಿಕೋಪಗಳು ಚೌತಿಯ ಸಂಭ್ರಮಕ್ಕೆ ಬ್ರೇಕ್ ಹಾಕಿವೆ.
ಪರಿಸರಸ್ನೇಹಿ ಗಣಪ: ಜೇಡಿಮಣ್ಣಿನಿಂದ ಸಾಂಪ್ರದಾಯಿಕವಾಗಿ ನೂರಾರು ಮೂರ್ತಿಗಳನ್ನು ತಯಾರಿಸುತ್ತಿದ್ದೇನೆ. ಮೂರ್ತಿಗಳಿಗೆ ಪೇಂಟಿಂಗ್ ಕೆಲಸ ಬಾಕಿ ಇದೆ. ಪರಿಸರಸ್ನೇಹಿ ಗಣಪತಿ ಮೂರ್ತಿ ತಯಾರಿಸುವುದು ವಿಶೇಷವಾಗಿದೆ ಎಂದು ಗಣಪತಿ ಮೂರ್ತಿ ತಯಾರಕರಾದ ವಿಕಾಸ ಬಾಂದೇಕರ ತಿಳಿಸಿದರು.