ಅ. 11ರಿಂದ ಅ. 30ರೊಳಗೆ ಜಿಲ್ಲಾ ಮಟ್ಟದ ಯುವ ಸಂಸತ್ ಆಯೋಜಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಬ್ಬರಂತೆ ಐವರು ಅತ್ಯುತ್ತಮ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಯುವ ಸಂಸತ್‌ಗೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಉತ್ತಮ ವಾದ ಮಂಡನೆ ಮಾಡಿದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು.
ಕೊಪ್ಪಳ: ವಿದ್ಯಾರ್ಥಿಗಳಲ್ಲಿ ಸಂಸದೀಯ ನಡಾವಳಿಗಳು, ಸಂವಿಧಾನಿಕ ಮೌಲ್ಯಗಳು ಹಾಗೂ ಶಾಸಕಾಂಗದ ಕಾರ್ಯವೈಖರಿ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ‘ಯುವ ಸಂಸತ್’ ಕಾರ್ಯಕ್ರಮವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಚ್ಚುಕಟ್ಟಾಗಿ ನಡೆಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಗೂಗಲ್ ಮೀಟ್ ಮೂಲಕ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಕೀಲರು ಮತ್ತು ನ್ಯಾಯಾಧೀಶರೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ತಲಾ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಶೇ. 50ರಷ್ಟು ಬಾಲಕಿಯರು ಹಾಗೂ ಶೇ. 50ರಷ್ಟು ಬಾಲಕರಿರಬೇಕು. ಕಲೆ, ವಾಣಿಜ್ಯ, ವಿಜ್ಞಾನ, ಕಾನೂನು, ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದರು.ತಾಲೂಕು ಕೇಂದ್ರಗಳಲ್ಲಿ ವಿಧಾನಸಭೆ ಅಥವಾ ಸಂಸತ್ತಿನ ಮಾದರಿಯಲ್ಲಿ ಸ್ಪೀಕರ್ ಪೀಠ, ಉಪಸಭಾಪತಿ ಆಸನ, ಪ್ರೇಕ್ಷಕರ ಹಾಗೂ ಮಾಧ್ಯಮ ಗ್ಯಾಲರಿ ವ್ಯವಸ್ಥೆ ಮಾಡಬೇಕು. ತಾಲೂಕಿಗೆ ಸಂಬಂಧಿಸಿದ ಮೂರು ಸ್ಥಳೀಯ ವಿಷಯಗಳನ್ನು ಚರ್ಚೆಗೆ ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿವಾದಾತ್ಮಕ ವಿಷಯಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಬಾರದು. ಅ. 10ರೊಳಗೆ ತಾಲೂಕು ಮಟ್ಟದ ಯುವ ಸಂಸತ್ ನಡೆಸುವಂತೆ ಸೂಚಿಸಿದರು.
ಅ. 11ರಿಂದ ಅ. 30ರೊಳಗೆ ಜಿಲ್ಲಾ ಮಟ್ಟದ ಯುವ ಸಂಸತ್ ಆಯೋಜಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಬ್ಬರಂತೆ ಐವರು ಅತ್ಯುತ್ತಮ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಯುವ ಸಂಸತ್‌ಗೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಉತ್ತಮ ವಾದ ಮಂಡನೆ ಮಾಡಿದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು.ವಿದ್ಯಾರ್ಥಿಗಳಿಗೆ ಸಂವಿಧಾನ ಹಾಗೂ ಸಂಸದೀಯ ಕಾರ್ಯವಿಧಾನದ ಕುರಿತು ವಕೀಲರು ಮತ್ತು ರಾಜಕೀಯ ವಿಜ್ಞಾನ ಉಪನ್ಯಾಸಕರ ನೆರವಿನಿಂದ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.