ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸ ನಮ್ಮ ಮೂಲಧ್ಯೇಯವಾಗಿದ್ದು, ಭಾರತೀಯ ಸಂಸ್ಕೃತಿ, ಪರಂಪರೆ ಜಗತ್ತಿಗೆ ಪರಿಚಯಿಸುವುದರ ಜೊತೆ, ಮನುಷ್ಯನ ಮನಸ್ಸು ಬದಲಾವಣೆಯಾಗಲು 2025ರ ಭಾರತೀಯ ಸಂಸ್ಕೃತಿ ಉತ್ಸವ ಪ್ರೇರಣೆಯಾಗಲಿದೆ ಎಂದು ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ನಗರದ ಕುಂಬಾರ ಓಣಿ ಹಿರೇಮಠ ಸಭಾಂಗಣದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಕೊತ್ತಲ ಸುವರ್ಣ ಜಯಂತಿ ಉತ್ಸವ ನಿಮಿತ್ತ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
2025ರ ಜ.29 ರಿಂದ ಫೆ.6 ರವರೆಗೆ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವರ್ಣ ಜಯಂತಿಯ ಹಬ್ಬ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ-7 ಕಾರ್ಯಕ್ರಮ 250 ಎಕರೆ ಪ್ರದೇಶದಲ್ಲಿ ಜರುಗಲಿದ್ದು, ಸುಮಾರು 40 ಲಕ್ಷ ಜನರು 9 ದಿನದ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಂದು ವರ್ಷದ ಮುಂಚಿತವಾಗಿಯೇ ತಯಾರಿ ನಡೆದಿದೆ ಎಂದರು.
ದೇಶದ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನ ಇದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕು. ಜನತೆಯ ಮೇಲೆ ಉತ್ತಮ ಪರಿಣಾಮ ಬೀರಲಿದೆ. ರಾಷ್ಟ್ರದ ಅಭಿವೃದ್ಧಿ ಪೂರಕವಾದ ಬೃಹತ್ ಕಾರ್ಯಕ್ರಮದಲ್ಲಿ ನಾಡಿನ ದೇಶದ ದಿಗ್ಗಜರು, ಜ್ಞಾನಿಗಳು, ವಿವಿಧ ರಂಗದಲ್ಲಿ ಉನ್ನತ ಸಾಧನೆ ಮಾಡಿದ ಪ್ರತಿಭಾನ್ವಿತರು ವಿವಿಧ ಮಠಾಧೀಶರು ಹೀಗೆ ಎಲ್ಲರನ್ನು ಒಳಗೊಂಡ ಕಾರ್ಯಕ್ರಮ ಇದಾಗಲಿದ್ದು, ಪ್ರತಿಯೊಬ್ಬರೂ ಇದೊಂದು ಮಹತ್ವದ ಕಾರ್ಯವೆಂದು ತಿಳಿದು ಯಶಸ್ಸಿಗೆ ಕೈಜೋಡಿಸಿ ಎಂದರು.
ಕುಂಬಾರ ಓಣಿ ಹಿರೇಮಠದ ಪೂಜ್ಯ ಸೂಗೂರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅಮೃತರಾವ ಮುಲಗೆ, ಭೀಮರೆಡ್ಡಿ ಬೈರೆಡ್ಡಿ, ಗುರುಬಸಯ್ಯ ಗದ್ದುಗೆ, ನರಸಿಂಹ ವೈದ್ಯ, ಸುಧಾಕರ ಗುಡಿ, ಸೋಮಶೇಖರಯ್ಯ ಹಿರೇಮಠ, ಡಾ. ಶಿವರಾಜ ದೇಶಮುಖ, ನಿಂಗಯ್ಯ ಮೇಲಿನಮಠ, ಮಲ್ಲಣ್ಣ ಹೊಸ್ಮನಿ, ಮಲ್ಲರೆಡ್ಡಿ ಪಾಟೀಲ್, ಶರಣಪ್ಪ ಮಡ್ನಾಳ, ಮಲ್ಲಿಕಾರ್ಜುನ ಆವಂಟಿ, ರೇಖು ಚವ್ಹಾಣ, ತಿಪ್ಪಣ್ಣ ಕ್ಯಾತನಾಳ, ಎಂ.ಬಿ. ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಅಶೋಕ ಘನಾತೆ, ತುಳಜಾರಾಮ ಚವ್ಹಾಣ, ಕಲ್ಲಯ್ಯ ಸ್ವಾಮಿ, ಲಕ್ಷ್ಮಣ ಲಾಳಸೇರಿ, ಬಸವರಾಜ ಗೋಗಿ ಇತರರಿದ್ದರು.