ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಸಂಸದರ ಕ್ರೀಡಾಮಹೋತ್ಸವಕ್ಕೆ ಪಟ್ಟಣದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ತಾಲೂಕು ಕ್ರೀಡಾಂಗಣದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಬ್ಯಾಡಗಿ: ಜ. 29ರಿಂದ ಆರಂಭವಾಗಲಿರುವ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಸಂಸದರ ಕ್ರೀಡಾಮಹೋತ್ಸವಕ್ಕೆ ಪಟ್ಟಣದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ತಾಲೂಕು ಕ್ರೀಡಾಂಗಣದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾರಥ್ಯದಲ್ಲಿ ನಡೆಯಲಿರುವ ಕ್ರೀಡಾಕೂಟ ಇದಾಗಿದ್ದು, ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 16 ವರ್ಷ ಮೇಲ್ಪಟ್ಟವರು ಕ್ರೀಡಾಕೂಟದಲ್ಲಿ ಭಾಗ ವಹಿಸಲು ಅವಕಾಶವಿದೆ.ಕಳೆದೊಂದು ವಾರದಿಂದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು ಕಬಡ್ಡಿಗೆ ಕ್ರೀಡೆಗೆ 2, ಖೋ- ಖೋ ಮತ್ತು ವಾಲಿಬಾಲ್ ತಲಾ ಒಂದು ಅಂಕಣಗಳನ್ನು ಸಿದ್ದಪಡಿಸಲಾಗಿದೆ, ಕಬಡ್ಡಿ ಕ್ರೀಡೆಗಳು ಮ್ಯಾಟ್ ಮೇಲೆ ನಡೆಯಲಿದ್ದು, ಕ್ರೀಡಾಪಟುಗಳಿಗೆ ಶೂ ಕಡ್ಡಾಯ, ಇನ್ನುಳಿದಂತೆ ಖೋಖೋ ಮತ್ತು ವಾಲಿಬಾಲ್ ಮಣ್ಣಿನ ಅಂಕಣದಲ್ಲಿ ನಡೆಯಲಿವೆ. ಸುಮಾರು 2 ಸಾವಿರ ಜನ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ.
ಕ್ರೀಡೆಗಳುಕ್ರೀಡಾಕೂಟದಲ್ಲಿ ಗುಂಪು ಆಟಗಳಾಗಿ ಕಬಡ್ಡಿ, ವಾಲಿಬಾಲ್, ಖೋಖೋ, ಹಗ್ಗ ಜಗ್ಗಾಟ ನಡೆಯಲಿದ್ದು, ಅಥ್ಲೆಟಿಕ್ಸ್ ನಲ್ಲಿ 100ಮೀ.ಓಟ, 400 ಮೀಟರ್ ಓಟ, 4 ಮತ್ತು 400 ರೀಲೆ, ಗುಂಡು ಎಸೆತ, ಚಕ್ರಎಸೆತ, ಗೋಣಿ ಚೀಲದ ಓಟ ವಿಕಲಚೇತರಿಗಾಗಿ 50 ಮೀಟರ ಓಟ ಸೇರಿದಂತೆ ಇನ್ನಿತರ ಕ್ರೀಡೆಗಳು ನಡೆಯಲಿವೆ.
ಬ್ಯಾಡಗಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬ್ಯಾಡಗಿ ಪಟ್ಟಣ ಸೇರಿದಂತೆ ಶಿಡೇನೂರ, ಮೋಟೆಬೆನ್ನೂರ, ಕಾಗಿನೆಲೆ ಮತ್ತು ಹಾವೇರಿ ತಾಲೂಕಿನ ದೇವಗಿರಿ, ಕಬ್ಬೂರ ಹಾಗೂ ರಾಣಿಬೆನ್ನೂರ ತಾಲೂಕಿನ ಜೋಯಿಸರಹರಳಳ್ಳಿ ಹಾಗೂ ಕಾಕೋಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಕ್ರೀಡಾಪಟುಗಳು ಸೇರಿದಂತೆ ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.100ಕ್ಕೂ ಹೆಚ್ಚು ತೀರ್ಪುಗಾರರು
ಪಂದ್ಯಾವಳಿ ಯಶಸ್ವಿಗೊಳಿಸಲು 100ಕ್ಕೂ ಹೆಚ್ಚು ತೀರ್ಪುಗಾರರನ್ನು ನಿಯೋಜಿಸಲಾಗಿದ್ದು, ಫೆಡರೇಶನ್ ಇತ್ತೀಚಿನ ನಿಯಮಾವಳಿ ಮಾದರಿಯಲ್ಲಿ ಕ್ರೀಡೆಗಳನ್ನು ಆಯೋಜಿಸಲಾಗುವುದು ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಹೇಳಿದ್ದಾರೆ.ನಾಳೆ ಸಂಸದರ ಕ್ರೀಡಾಕೂಟ
ಹಾನಗಲ್ಲ:
ಹಾನಗಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಸದರ ಕ್ರೀಡಾಕೂಟ ಜ. 30ರಂದು ನಡೆಯಲಿದ್ದು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಿಸಿದರು.ಹಾನಗಲ್ಲಿನ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಪಟ್ಟಣದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಕ್ರೀಡಾಂಗಣದಲ್ಲಿ ಜನವರಿ 30ರಂದು ಬೆಳಗ್ಗೆ 10ಕ್ಕೆ ಕೀಡೆಗಳು ಆರಂಭವಾಗುವವು. ಕ್ರೀಡಾಕೂಟ ಆರಂಭದವರೆಗೂ ಹೆಸರು ನೋಂದಾಯಿಸಬಹುದಾಗಿದೆ. ಒಟ್ಟು 12 ಆಟಗಳಿದ್ದು 4 ಗುಂಪು ಆಟಗಳು ಹಾಗೂ 8 ವೈಯಕ್ತಿಕ ಆಟಗಳಿರುತ್ತವೆ. ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಆಟಗಳಾಗಿರುತ್ತವೆ. ಗುಂಪು ಆಟಗಳಿಗೆ ಪ್ರತಿ ಆಟಕ್ಕೆ ಪ್ರಥಮ ಬಹುಮಾನ ₹10 ಸಾವಿರ, ದ್ವಿತೀಯ ಬಹುಮಾನ ₹7 ಸಾವಿರ ತೃತೀಯ ಬಹುಮಾನ ₹5 ಸಾವಿರ. ವೈಯಕ್ತಿಕ ಆಟಗಳಿಗೆ ಪ್ರತಿ ಆಟಕ್ಕೆ ಪ್ರಥಮ ಬಹುಮಾನ ₹1500, ದ್ವಿತೀಯ ಬಹುಮಾನ ₹1000, ತೃತೀಯ ಬಹುಮಾನ ₹500 ರೂಗಳಾಗಿರುತ್ತವೆ. 16 ವರ್ಷ ಮೇಲ್ಪಟ್ಟ ಹಾನಗಲ್ಲ ತಾಲೂಕು ನಿವಾಸಿಗಳಿಗೆ ಮಾತ್ರ ಆಟದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ತಾಲೂಕು ಮಟ್ಟದಲ್ಲಿ ಆಯ್ಕೆಯಾದವರಿಗೆ ಮಾತ್ರ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು.