ಕೆಪಿಎಸ್ ಶಾಲೆಗಳನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ 18000 ಶಿಕ್ಷಕರ ನೇಮಕಕ್ಕೂ ಸಿದ್ದತೆ ನಡೆದಿದೆ. ಈ ದೇಶದ ಜನರು ಏಕತೆಯಿಂದ ಒಂದಾಗಿ ಬಾಳುವಂತಾಗಲು ಸರ್ಕಾರಿ ಶಾಲೆಗಳ ಅಭಿವೃದ್ಧಿಯೂ ಅಗತ್ಯವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕೆಪಿಎಸ್ ಶಾಲೆಗಳನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ 18000 ಶಿಕ್ಷಕರ ನೇಮಕಕ್ಕೂ ಸಿದ್ದತೆ ನಡೆದಿದೆ. ಈ ದೇಶದ ಜನರು ಏಕತೆಯಿಂದ ಒಂದಾಗಿ ಬಾಳುವಂತಾಗಲು ಸರ್ಕಾರಿ ಶಾಲೆಗಳ ಅಭಿವೃದ್ಧಿಯೂ ಅಗತ್ಯವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ತೀರ್ಥಹಳ್ಳಿ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ನೂತನ ಪಧಾಧಿಕಾರಿಗಳನ್ನು ಅಭಿನಂದಿಸಿ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಫಲಿತಾಂಶ ನಿರೀಕ್ಷೆಗಿಂತ ಕುಸಿಯುತ್ತಿರುವುದಕ್ಕೆ ಕಾರಣರಾಗುವ ಶಿಕ್ಷಕರನ್ನು ಹೊಣೆ ಮಾಡಲಾಗುವುದು. ಈ ವರ್ಷ ಅನುತ್ತೀರ್ಣರಾದ 1.16 ಲಕ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2 ಮತ್ತು 3ನೇ ಪೂರಕ ಪರೀಕ್ಷೆಗೆ ಶುಲ್ಕವನ್ನೇ ಪಡೆಯದೇ ಪರೀಕ್ಷೆ ನೀಡಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ 1.15 ಸಾವಿರ ಕೋಟಿ ಹಣವನ್ನು ವೆಚ್ಚ ಮಾಡುವ ಮೂಲಕ ಬಡ ಜನರ ಬದುಕಿಗೆ ಭರವಸೆಯ ಬೆಳಕನ್ನು ನೀಡಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಬಡವರ ಮನೆಯ ಬೆಳಕಾಗಿದ್ದು ಮುಂಬರುವ ದಿನಗಳಲ್ಲಿ ಸಮ ಸಮಾಜದ ಹಿತದೃಷ್ಟಿಯಿಂದ ಶಿಕ್ಷಣವನ್ನೂ ಗ್ಯಾರೆಂಟಿ ಯೋಜನೆಗೆ ಒಳಪಡಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪೂರ್ಣೇಶ್ ಕೆಳಕೆರೆ ಸೇರಿದಂತೆ ನೂತನ ಪಧಾದಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥಗೌಡ, ಕಾಂಗ್ರೆಸ್ ಈ ದೇಶಕ್ಕೆ ಅನಿವಾರ್ಯವಾಗಿದ್ದು ಕೇವಲ ಜಾತಿಧರ್ಮ ಮುಂತಾದ ಒಡೆದು ಆಳುವ ನೀತಿಯ ಬಿಜೆಪಿ ಎಂದೂ ತನ್ನ ಸ್ವಂತ ಶಕ್ತಿಯ ಮೇಲೆ ಗೆಲುವು ಸಾಧಿಸುತ್ತಿಲ್ಲ. ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಬೇಕು ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಜನರನ್ನು ವಂಚಿಸುತ್ತಲೇ ಜಿಎಸ್‍ಟಿ ಹೇರಿಕೆ ಮಾಡಿ ಜನರನ್ನು ಹಿಂಡಿರುವ ಕೇಂದ್ರ ಸರ್ಕಾರ ಇದೀಗ ತನ್ನ ತಪ್ಪಿನ ಅರಿವಾದ ನಂತರ ತೆರಿಗೆ ಕಡಿತ ಮಾಡಿ ಜನರನ್ನು ಉದ್ದಾರ ಮಾಡುವಂತೆ ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಎಂಎಲ್ಸಿ ಬಲ್ಕೀಶ್‍ಭಾನು, ಜವಳಿ ನಿಗಮದ ಅಧ್ಯಕ್ಷ ಚೇತನ್‍ಗೌಡ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಘಟಕದ ಅಧ್ಯಕ್ಷರುಗಳಾದ ಕೆಸ್ತೂರು ಮಂಜುನಾಥ್ ಮತ್ತು ಮುಡುಬಾ ರಾಘವೇಂದ್ರ, ಗೀತಾ ರಮೇಶ್, ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ ಇತರರು ಇದ್ದರು.