ಕೊಟ್ಟೂರು: ನ್ಯಾಯಾಲಯದ ಕಟ್ಟಡ ಎಷ್ಟು ವೇಗದಲ್ಲಿ ಸಿದ್ಧಗೊಳ್ಳುತ್ತದೆಯೋ ಅದೇ ವೇಗದಲ್ಲಿ ಕೊಟ್ಟೂರಿನಲ್ಲಿ ನ್ಯಾಯಾಲಯ ಆರಂಭಿಸಲು ಸಿದ್ಧರಿದ್ದೇವೆ ಎಂದು ವಿಜಯನಗರ ಜಿಲ್ಲಾ ಆಡಳಿತಾತ್ಮಕ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯರೂರು ಹೇಳಿದರು.
ಪಟ್ಟಣದ ಪಪಂ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ತಾತ್ಕಾಲಿಕ ಕಟ್ಟಡವನ್ನು ಅವರು ಭಾನುವಾರ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಜನ ಸಾಮಾನ್ಯರು ಅಂಗವಿಕಲರು ಮತ್ತಿತರ ಜನರಿಗೆ ಸುಲಭವಾಗಿ ನ್ಯಾಯಾಲಯಕ್ಕೆ ಬರಲು ಅನುಕೂಲವಾಗುರುವಂತೆ ಪಟ್ಟಣದ ಮಧ್ಯೆ ಖಾಯಂ ಕಟ್ಟಡ ನಿರ್ಮಾಣವಾಗಬೇಕು. ಕೊಟ್ಟೂರಿನಲ್ಲಿ ಇದೀಗ ತಾತ್ಕಾಲಿಕ ಕಟ್ಟಡದಲ್ಲಿ ನ್ಯಾಯಾಲಯ ಆರಂಭಿಸುವ ನಿರ್ಧಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಗೆ ಸದ್ಯಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದಕ್ಕೆ ಅನುಗುಣವಾಗಿ ನ್ಯಾಯಾಲಯವನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ನ್ಯಾಯಾಲಯ ಕಲಾಪ ಆರಂಭಿಸುವುದಾಗಿ ಹೇಳಿದರು.ಪಪಂ ಹಿಂಭಾಗದಲ್ಲಿನ ಬಾಲ ಭವನ ಕಟ್ಟಡವನ್ನುನ್ಯಾಯಾಲಯದ ಕಚೇರಿಗೆ ಮತ್ತಿತರ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಕಟ್ಟಡದಲ್ಲಿ ಸದ್ಯಕ್ಕೆ ವಕೀಲರ ಸಂಘಕ್ಕೆ ಜಾಗ ಕೊಡಲಾಗುವುದಿಲ್ಲ. ಬೇರೆ ಕಡೆ ವಕೀಲರು ತಮ್ಮ ಸಂಘ ಕಚೇರಿ ಆರಂಭಿಸುವಂತೆ ಸೂಚಿಸಿದರು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಮತ್ತು ಇತರರಿಗೆ ಸೂಕ್ತ ಬಗೆಯಲ್ಲಿ ನ್ಯಾಯಾಲಯದ ಅನುಕೂಲತೆಗಳು ಆಗಲು ವಿಚಾರವಂತರು, ಪತ್ರಕರ್ತರು, ಸ್ಥಳೀಯ ಜನತೆ ಪೂರಕವಾಗಿ ಕೆಲಸ ಮಾಡಬೇಕೆಂದು ಅವರು ಹೇಳಿದರು.
ಕೊಟ್ಟೂರು ಹೊರವಲಯದಲ್ಲಿ ಪೂರ್ಣ ಪ್ರಮಾಣದ ಖಾಯಂ ಕಟ್ಟಡ ನಿರ್ಮಿಸಲು ತಾಲೂಕು ಆಡಳಿತ ಈಗಾಗಲೇ ಸೂಕ್ತ ನಿವೇಶನ ನೀಡಿದೆ. ನಿವೇಶನ ವಿಶಾಲವಾಗಿದ್ದು, ನ್ಯಾಯಾಲಯ ಕಟ್ಟಡ ಮತ್ತು ನ್ಯಾಯಾಧೀಶರ ವಸತಿಗೃಹಗಳು ಕಚೇರಿ ಮತ್ತು ವಕೀಲರ ಸಂಘದ ಕಚೇರಿಯನ್ನು ಕಟ್ಟಲು ಅಲ್ಲಿ ಸಾಧ್ಯವಾಗುತ್ತದೆ ಎಂದು ಗುರುಸಿದ್ದನಗೌಡ ನ್ಯಾಯಮೂರ್ತಿಗಳಿಗೆ ವಿವರಿಸಿದರು.ವಿಜಯನಗರ ಜಿಲ್ಲೆ ಪ್ರಧಾನ ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ, ಸಹಾಯಕ ಜಿಲ್ಲಾ ಸತ್ರ ನ್ಯಾಯಾಧೀಶ ಬಿ.ಪಿ. ಕುಮಾರಸ್ವಾಮಿ, ಕೂಡ್ಲಿಗಿ ಸಿವಿಲ್ ಹಿರಿಯ ನ್ಯಾಯಾಧೀಶ ಜೆ.ಯೋಗೇಶ, ಸಿವಿಲ್ ಮತ್ತು ಜೆಎಂಎಫ್‌ಎಸ್ ನ್ಯಾಯಾಧೀಶೆ ಜೆ.ಎಚ್.ಜೆ. ಶಿಲ್ಪಾ, ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ, ಸಿಇಐ ದುರುಗಪ್ಪ, ಪಿಡಬ್ಲುಡಿ ಎಇಇ ಕೆ.ನಾಗನಗೌಡ, ಪಪಂ ಜೆಇ ಜಿ.ಎಂ. ಸಿದ್ದಯ್ಯ, ವಕೀಲರಾದ ಪ್ರಭುದೇವ, ಬಾವಿಕಟ್ಟೆ ಶಿವಾನಂದ, ಜಿ.ಎಂ. ಮಲ್ಲಿಕಾರ್ಜುನಯ್ಯ, ಡಿ.ನಿಂಗರಾಜ, ಡಿ.ಕರಿಬಸವರಾಜ, ಜಯಶ್ರೀ ನಿಂಗರಾಜ, ಸಾವಿತ್ರಿಬಾಯಿ, ನಾಗರಾಜ ಗಂಗಮ್ಮನಹಳ್ಳಿ, ಟಿ.ಎಂ.ಸೋಮಯ್ಯ, ಬಸವರಾಜ, ಹನುಮಂತಪ್ಪ, ಸಂದೀಪ್, ಚನ್ನಬಸಯ್ಯ, ದೇವರಾಜನಾಯ್ಕ, ಖುರ್ಷಿದ್, ರಮೇಶ್ ಇತರರು ಇದ್ದರು.
ಇದಕ್ಕೂ ಮೊದಲು ಕಟ್ಟಡ ವೀಕ್ಷಿಸಲು ಆಗಮಿಸಿದ ನ್ಯಾಯಾಮೂರ್ತಿ ಪ್ರದೀಪ್ ಸಿಂಗ್ ಯರೂರ್, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ, ಸಹಾಯಕ ಜಿಲ್ಲಾ ಸತ್ರ ನಾಯ್ಯಾಧೀಶ ಡಿ.ಪಿ. ಕುಮಾರಸ್ವಾಮಿ, ಸಿವಿಲ್ ಹಿರಿಯ ನ್ಯಾಯಾಧೀಶ ಜೆ.ಯೋಗೀಶ, ನ್ಯಾಯಾಧೀಶೆ ಎಚ್.ಜೆ. ಶಿಲ್ಪಾ ಅವರನ್ನು ಕೊಟ್ಟೂರು ನ್ಯಾಯಾಲಯ ಹೋರಾಟ ಸಮಿತಿಯಿಂದ ಸ್ವಾಗತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.