ಬಿಜೆಪಿ ಹಿರಿಯ ಧುರೀಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷದ ರಾಜಕೀಯ ಜೀವನವೇ ಒಂದು ಪಾಠ. ಈ ಸಂದೇಶವನ್ನು ಯುವ ಜನಾಂಗಕ್ಕೆ ತಲುಪಿಸಲು ಮೇ 9 ರಂದು ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಹಿರಿಯ ಧುರೀಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷದ ರಾಜಕೀಯ ಜೀವನವೇ ಒಂದು ಪಾಠ. ಈ ಸಂದೇಶವನ್ನು ಯುವ ಜನಾಂಗಕ್ಕೆ ತಲುಪಿಸಲು ಮೇ 9 ರಂದು ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಹೋರಾಟ, ಸಿದ್ದಾಂತಗಳ ಮೂಲಕ ಪಕ್ಷ ಕಟ್ಟಿದವರು. ಒಂದು ಕಾಲದಲ್ಲಿ ಕೇವಲ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣರ ಪಕ್ಷ ಎಂದು ಜಾತಿ ಹಣೆ ಪಟ್ಟಿ ಇದ್ದ ಪಕ್ಷಕ್ಕೆ ಎಲ್ಲರನ್ನೂ ಒಗ್ಗೂಡಿಸಿ ಜಾತ್ಯತೀತ ಪಕ್ಷ ಎಂದು ಹೊಸ ಟ್ವಿಸ್ಟ್ ಕೊಟ್ಟವರು ಬಿ.ಎಸ್‌.ಯಡಿಯೂರಪ್ಪ ಅವರು. ರೈತರ ಸಾಲ ಮನ್ನಾ, ರೈತರ ಪರ ಬಜೆಟ್ ಮಂಡನೆ, ಮಹಿಳೆಯರಿಗೆ ಭಾಗ್ಯಲಕ್ಷ್ಮೀ, ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಮೊದಲಾದ ಮಾನವೀಯ ಕೆಲಸಗಳೊಂದಿಗೆ, ತಾಯಿ ಹೃದಯದ ಯೋಜನೆ ಕೊಟ್ಟ ಕೀರ್ತಿ ಯಡಿಯೂರಪ್ಪ ಅವರದ್ದು ಎಂದು ಬಣ್ಣಿಸಿದರು.

ಯಡಿಯೂರಪ್ಪ ಅವರು ತಾವು ಪ್ರಕಟಿಸಿದ ಯೋಜನೆಗಳನ್ನು ಅಧಿಕಾರಿಗಳ ಬೆನ್ನತ್ತಿ ಕೆಲಸ ಮಾಡಿಸುವ ಛಲಗಾರರು. ತಾವು ಅನೇಕ ಮುಖ್ಯಮಂತ್ರಿಗಳ ಸರ್ಕಾರಗಳಲ್ಲಿ ಸೇವೆ ಸಲ್ಲಿಸಿದ್ದು, ನಿಂತಲ್ಲೇ ನೀತಿ ನಿರೂಪಣೆ ಮಾಡುತ್ತಿದ್ದ ಯಡಿಯೂರಪ್ಪ ಅಂತಹ ಮುಖ್ಯಮಂತ್ರಿಯನ್ನು ತಾವು ನೋಡಿಲ್ಲ ಎಂದು ತಮ್ಮ ಹಾಗೂ ಯಡಿಯೂರಪ್ಪ ಅವರ ನಡುವಿನ ರಾಜಕೀಯ ಜೀವನದ ಅನುಭವಗಳನ್ನು ಬಿಚ್ಚಿಟ್ಟರು.

ಮೇ 9 ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವದ ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದರಾದ ಬಿ.ವೈ.ರಾಘವೇಂದ್ರ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸುವರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್‍ಯ ಸ್ವಾಮಿಗಳು, ಉಜ್ಜಯನಿಯ ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್‍ಯ ಮಹಾಸ್ವಾಮಿಗಳು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಕೇದಾರನಾಥದ ಡಾ.ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಆದಿಚುಂಚನಗಿರಿಯ ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ವಿವಿಧ ಮಠಾದೀಶರುಗಳು ವಹಿಸುವರು ಎಂದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಮಧ್ಯಾಹ್ನ 3.30ಕ್ಕೆ ಸಮಾವೇಶಕ್ಕೆ ಆಗಮಿಸಲಿದ್ದು, ಅಭಿನಂದನಾ ಭಾಷಣ ಮಾಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಸುಮಾರು 60 ಸಾವಿರ ಕಾರ್ಯಕರ್ತರು ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಸುಮಾರು 10 ಲಕ್ಷ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಅವರೆಲ್ಲರಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ . ಮೇ8 ರಂದು ಸಂಜೆ ಬಿ.ಎಸ್.ಯಡಿಯೂರಪ್ಪ ಅವರ ಪುರಪ್ರವೇಶ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ, ಎಸ್.ರುದ್ರೇಗೌಡ, ಆರ್.ಕೆ.ಸಿದ್ದರಾಮಣ್ಣ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಬಿಳಕಿ ಕೃಷ್ಣಮೂರ್ತಿ, ಮಂಗೋಟೆ ರುದ್ರೇಶ್, ಸಂತೋಷ್ ಬಳ್ಳೇಕೆರೆ, ಎಸ್.ಚಂದ್ರಶೇಖರ್, ಎನ್.ಮಂಜುನಾಥ್ ಇದ್ದರು.