ಶ್ರಾವಣ ಮಾಸ ಮುಗಿದು ಬೆನಕನ ಅಮವಾಸ್ಯೆ ಕಳೆದ ನಂತರ ಭಾದ್ರಪದ ಮಾಸ ಆರಂಭದ ಪ್ರಥಮ ಹಬ್ಬ, ಹಿಂದೂಗಳಿಗೆ ಬಹು ದೊಡ್ಡ ಹಬ್ಬವಾಗಿರುವ ಗೌರಿ ಗಣೇಶ ಹಬ್ಬವನ್ನು ಸೆ.14ರಂದು ಸಂಭ್ರಮ ಸಡಗರದಿಂದ ಜಿಲ್ಲಾದ್ಯಂತ ಎಲ್ಲೆಡೆ ಆಚರಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
- ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ । ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ, ಕೇಸರಿ ಬಣ್ಣದ ತೋರಣಗಳು
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಶ್ರಾವಣ ಮಾಸ ಮುಗಿದು ಬೆನಕನ ಅಮವಾಸ್ಯೆ ಕಳೆದ ನಂತರ ಭಾದ್ರಪದ ಮಾಸ ಆರಂಭದ ಪ್ರಥಮ ಹಬ್ಬ, ಹಿಂದೂಗಳಿಗೆ ಬಹು ದೊಡ್ಡ ಹಬ್ಬವಾಗಿರುವ ಗೌರಿ ಗಣೇಶ ಹಬ್ಬವನ್ನು ಸೆ.14ರಂದು ಸಂಭ್ರಮ ಸಡಗರದಿಂದ ಜಿಲ್ಲಾದ್ಯಂತ ಎಲ್ಲೆಡೆ ಆಚರಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಪ್ರತಿವರ್ಷ ಗೌರಿ ಗಣೇಶ ಹಬ್ಬ ಎರಡು ದಿನ ಬೇರೆ ಬೇರೆ ಬರುತ್ತಿತ್ತು. ಈ ಬಾರಿ ಗೌರಿ ಗಣೇಶ ಹಬ್ಬ ಸೆ.14ರ ಸೋಮವಾರವೇ ಬಂದಿವೆ. ಈ ವರ್ಷವೂ ಅಲಂಕೃತ ಸುಂದರ ಮಂಟಪದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಜಿಲ್ಲೆಯಾದ್ಯಂತ ಸಂಘ ಸಂಸ್ಥೆಗಳು, ದೇವಾಲಯಗಳು, ಮನೆಗಳು, ಬೀದಿಗಳು ಸಜ್ಜಾಗಿದೆ. ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ, ಕೇಸರಿ ಬಣ್ಣದ ತೋರಣಗಳು ಭಕ್ತರನ್ನು ಸ್ವಾಗತಿಸಲು ಸಿದ್ಧಗೊಂಡಿವೆ.ನಗರದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟಿನಿಂದ ಈ ಬಾರಿ ಕೊಲ್ಕತ್ತದ ಶಿವಶಕ್ತಿಧಾಮ ದೇವಸ್ಥಾನದ ಮಾದರಿ ಮಹಾಮಂಟಪವನ್ನು ನಿರ್ಮಿಸಲಾಗುತ್ತಿದೆ. 100 ಅಡಿ ಅಗಲ, 65 ಅಡಿ ಎತ್ತರದ ಮಹಾಮಂಟಪದಲ್ಲಿ 15 ಅಡಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂರ್ತಿಯನ್ನು ಶುಕ್ರವಾರ ಸಂಜೆಯೇ ಬೆಳಗಾವಿಯಿಂದ ತರಲಾಗಿದೆ.
ಶ್ರೀ ದತ್ತ ಅವತಾರ ವೈಭವ:ಇಲ್ಲಿನ ಎಸ್.ಕೆ.ಪಿ. ರಸ್ತೆಯ ಕಾಸಲ್ ವಿಠ್ಠಲ್ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವಾಸವಿ ಯುವಜನ ಸಂಘದಿಂದ 45ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸುತ್ತಿದ್ದು, ಶ್ರೀ ದತ್ತ ಅವತಾರ ವೈಭವ ರೂಪಕವನ್ನು ಪ್ರದರ್ಶಿಸಲಾಗುತ್ತಿದೆ. ಈ ಪ್ರದರ್ಶನವು ಸೆ.15 ರಿಂದ 19ರವರೆಗೆ ನಿತ್ಯ ಸಂಜೆ 6.30 ರಿಂದ ರಾತ್ರಿ 9 ಗಂಟೆವರೆಗೆ ಪ್ರದರ್ಶನ ನಡೆಯಲಿದೆ. ಇದರ ಅಂಗವಾಗಿ ದೇವಸ್ಥಾನದಲ್ಲಿ ನಿತ್ಯ ವಿವಿಧ ಹೋಮ, ಹವನ, ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಸುನಿಲ್, ಗೌರವಾಧ್ಯಕ್ಷರಾದ ಬಿ.ಎನ್.ಸಾಯಿಪ್ರಸಾದ್, ಎನ್.ವಿ.ಬದರಿನಾಥ್ ತಿಳಿಸಿದ್ದಾರೆ.
ಪುರಿ ಜಗನ್ನಾಥ ಸ್ವಾಮಿ ದರ್ಶನ:ಪಿ.ಜೆ.ಬಡಾವಣೆ, 6ನೇ ಮೇನ್, 7ನೇ ಕ್ರಾಸ್‌ನ ಚೇತನಾ ಹೋಟೆಲ್ ರಸ್ತೆಯಲ್ಲಿ ಹಿಂದೂ ಯುವಶಕ್ತಿ (ಪ್ರಧಾನ ಕಚೇರಿ) ವತಿಯಿಂದ 46ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸುತ್ತಿದ್ದು, ಈ ಮಂಟಪದಲ್ಲಿ ಪುರಿ ಜಗನ್ನಾಥ ಸ್ವಾಮಿಯ ದರ್ಶನವನ್ನು ಪ್ರದರ್ಶಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಪಿ.ಮಧು ತಿಳಿಸಿದ್ದಾರೆ.
ಎಳ್ಳು ಉಂಡೆ ಅಲಂಕಾರ:ಎಂಸಿಸಿ ಎ ಬ್ಲಾಕ್‌ನ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದೂ ಯುವಶಕ್ತಿ ವತಿಯಿಂದ 35ನೇ ವರ್ಷದ ಗಣೇಶೋತ್ಸವ ಆಚರಿಸುತ್ತಿದ್ದು, ಈ ಬಾರಿ ಎಳ್ಳುಂಡೆ ಅಲಂಕಾರವನ್ನು ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಪಿ.ಸಿ.ರಾಮನಾಥ ತಿಳಿಸಿದ್ದಾರೆ.
ಕೊಲ್ಕತ್ತಾ ಗೋಲ್ಡನ್ ಟೆಂಪಲ್ ಮಾದರಿ:ಪಿ.ಜೆ.ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿಯ ರಾಂ ಅಂಡ್ ಕೋ ಗೆಳೆಯರ ಬಳಗದಿಂದ ರಾಂ ಅಂಡ್ ಕೋ ವೃತ್ತದಲ್ಲಿ 34ನೇ ವರ್ಷದ ವರಸಿದ್ಧಿ ವಿನಾಯಕ ಮಹೋತ್ಸವ ಅಚರಿಸುತ್ತಿದ್ದು, ಕೋಲ್ಕತ್ತಾದ ಗೋಲ್ಡನ್ ಟೆಂಪಲ್ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗಿದೆ. ಸೆ.23ರಂದು ಸದ್ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸೆ.24 ರಂದು ಸಕಲ ವಾದ್ಯಗಳೊಂದಿಗೆ ವಿನಾಯಕ ಸ್ವಾಮಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದು ಬಳಗದ ಅಧ್ಯಕ್ಷ ನಾಗೇಂದ್ರ ರೆಡ್ಡಿ ತಿಳಿಸಿದರು.
''''ಸಮುದ್ರ ಮಂಥನ'''' 3ಡಿ ಶೋ ಪ್ರದರ್ಶನ:ನಗರದ ಮಂಡಿಪೇಟೆಯ ಸ್ವಸ್ತಿಕ್ ಗ್ರೂಪ್ ವತಿಯಿಂದ 53ನೇ ವರ್ಷದ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ಸೆ.14ರಿಂದ 24ರವರೆಗೆ ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ''''ಸಮುದ್ರ ಮಂಥನ'''' ತ್ರಿಡಿ ಶೋ ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು, ಸೆ. 25ರ ಶುಕ್ರವಾರದಂದು ಮಧ್ಯಾಹ್ನ ಪ್ರಸಾದ ವಿನಿಯೋಗ, ಸಂಜೆ ಶ್ರೀ ಸ್ವಾಮಿಯ ವಿಸರ್ಜನೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಎಂಸಿಸಿ ಎ ಬ್ಲಾಕ್‌ನ ಚರ್ಚ್ ರಸ್ತೆಯಲ್ಲಿ ಹಿಂದೂ ಯುವ ಸೇನೆ, ಹಿಂದೂ ಸೈ ಯುವ ವೇದಿಕೆ (ಸೂಪರ್ ಮಾರುಕಟ್ಟೆ ಆವರಣ), ವಿನೋಬ ನಗರದ 2ನೇ ಮುಖ್ಯ ರಸ್ತೆಯ ವೀರ ವರಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ, ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 52ನೇ ವರ್ಷದ ಗಣೇಶೋತ್ಸವ, ಸೇರಿದಂತೆ ಎಸ್.ಎಸ್.ಬಡಾವಣೆ, ನಿಟ್ಟುವಳ್ಳಿ, ಎಂಸಿಸಿ ಎ ಮತ್ತು ಬಿ ಬ್ಲಾಕ್, ರಿಂಗ್ ರಸ್ತೆ, ವಿನಾಯಕ ನಗರ, ದೇವರಾಜ ಅರಸ್ ಬಡಾವಣೆ, ಶಿವಾಜಿ ನಗರ, ಹೊಂಡದ ಸರ್ಕಲ್, ದುರ್ಗಾಂಬಿಕಾ ದೇವಸ್ತಾನ ಸರ್ಕಲ್, ವಿದ್ಯಾನಗರ, ಎಸ್.ನಿಜಲಿಂಗಪ್ಪ ಬಡಾವಣೆ, ಕೊಂಡಜ್ಜಿ ರಸ್ತೆ, ಶಿಬಾರ, ಮಹಾರಾಜ ಪೇಟೆ, ಮಾಮಾಸ್ ಜಾಯಿಂಟ್ ರಸ್ತೆ, ಸ್ವಿಮ್ಮಿಂಗ್ ಪೂಲ್ ಸಮೀಪ, ಹಳೇ ಆರ್‌ಟಿಒ ರಸ್ತೆ, ದೊಡ್ಡಪೇಟೆ, ಸೇರಿದಂತೆ ನಗರದೆಲ್ಲೆಡೆ ಬೀದಿಬೀದಿಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ತಯಾರಿ ನಡೆಸಲಾಗಿತ್ತು. ಇನ್ನು ಬೆಳಗಾವಿ ಸೇರಿದಂತೆ ಬೇರೆಡೆಯಿಂದ ಕೆಲವು ದೊಡ್ಡ ದೊಡ್ಡ ಗಣಪತಿಗಳನ್ನು ಶುಕ್ರವಾರ, ಶನಿವಾರವೇ ನಗರಕ್ಕೆ ತರುತ್ತಿರುವುದು ಕಂಡುಬಂದಿತು.ಗಣಪತಿ ಹಬ್ಬದ ಅಂಗವಾಗಿ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿರುವ ಕುರಿತು ಸಂಘಟಕರು ತಿಳಿಸಿದರು. ಒಟ್ಟಾರೆ ಗೌರಿ ಗಣೇಶ ಹಬ್ಬದ ಆಚರಣೆಗೆ ದಾವಣಗೆರೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ.
- - --12ಕೆಡಿವಿಜಿ39: ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟಿನಿಂದ ಗಣೇಶ ಹಬ್ಬಕ್ಕೆ ಕೋಲ್ಕತ್ತಾದ ಶಿವಶಕ್ತಿಧಾಮ ದೇವಸ್ಥಾನ ಮಾದರಿ ಮಂಟಪ ನಿರ್ಮಿಸಲಾಗಿದೆ.-12ಕೆಡಿವಿಜಿ40: ದಾವಣಗೆರೆಯ ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿಯ ರಾಂ ಅಂಡ್ ಕೋ ಗೆಳೆಯರ ಬಳಗದಿಂದ ವಿನಾಯಕ ಮಹೋತ್ಸವಕ್ಕೆ ಕೊಲ್ಕತ್ತಾದ ಗೋಲ್ಡನ್ ಟೆಂಪಲ್ ಮಾದರಿಯಲ್ಲಿ ಮಂಟಪ ನಿರ್ಮಿಸುತ್ತಿರುವುದು.-12ಕೆಡಿವಿಜಿ41: ದಾವಣಗೆರೆಯ ವಿನೋಬ ನಗರದಲ್ಲಿ ಗಣಪತಿ ಹಬ್ಬಕ್ಕೆ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವುದು.