ಸಾರಾಂಶ
ಚಿತ್ರದುರ್ಗ: ನೆಲೆ ಇಲ್ಲದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿಗಳ ಬಗ್ಗೆ ಕಾಳಜಿ ವಹಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಈ ಸಂಬಂಧ ತುರ್ತಾಗಿ ನಿವೇಶನ ರಹಿತ ಅಲೆಮಾರಿಗಳ ಪಟ್ಟಿ ತಯಾರಿಸುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೂಚನೆ ನೀಡಿದರು.
ಚಿತ್ರದುರ್ಗ: ನೆಲೆ ಇಲ್ಲದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿಗಳ ಬಗ್ಗೆ ಕಾಳಜಿ ವಹಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಈ ಸಂಬಂಧ ತುರ್ತಾಗಿ ನಿವೇಶನ ರಹಿತ ಅಲೆಮಾರಿಗಳ ಪಟ್ಟಿ ತಯಾರಿಸುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲೆಮಾರಿಗಳು ದೇಶದ ಮೂಲನಿವಾಸಿಗಳು. ಭಾಷೆ, ಕೌಶಲ್ಯ, ಪರಂಪರೆ ಇದ್ದು, ಪಾರಂಪರಿಕ ವೃತ್ತಿಯಿಂದ ಜೀವನ ಮಾಡುತ್ತಿದ್ದಾರೆ. ಅಲೆಮಾರಿಗಳಿಗೆ ನೆಲೆ, ಶಿಕ್ಷಣ ಮೂಲಭೂತವಾಗಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಂತೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ, ಸರ್ಕಾರದ ಸೌಲಭ್ಯ, ಯೋಜನೆಗಳನ್ನು ಕಾಲಮಿತಿಯೊಳಗೆ ಫಲಾನುಭವಿಗಳಿಗೆ ತಲುಪಿಸಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 15,492 ಪರಿಶಿಷ್ಟ ಜಾತಿಯ ಅಲೆಮಾರಿಗಳು ಇದ್ದು, ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರಚ, ಕೊರಮ, ಬುಡ್ಗ ಜಂಗಮ, ಸುಡುಗಾಡು ಸಿದ್ದರು, ಹಂದಿ ಜೋಗೀಸ್, ಶಿಳ್ಯಕ್ಯಾತಾಸ್ ಚೆನ್ನದಾಸರ್ ಇದ್ದಾರೆ. 251 ಜನರು ಪರಿಶಿಷ್ಟ ಪಂಗಡದ ಮೇದಾರ ಅಲೆಮಾರಿ ಜನಾಂಗದವರು ಇದ್ದಾರೆ ಎಂದು ತಿಳಿಸಿದರು.2021-22ನೇ ಸಾಲಿನ ವಸತಿ ಯೋಜನೆಯಡಿ ಅಲೆಮಾರಿ ಸಮುದಾಯದವರು ಮನೆ ನಿರ್ಮಾಣ ಮಾಡಿಕೊಳ್ಳಲು ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಯಲ್ಲಿ ಪರಿಶಿಷ್ಟ ಜಾತಿಯ 83 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 9 ಫಲಾನುಭವಿಗಳ ಮಾಹಿತಿಯನ್ನು ರಾಜೀವ್ ಗಾಂಧಿ ನಿಗಮದ ಲಾಗಿನ್‍ನಲ್ಲಿ ಒದಗಿಸಲಾಗಿದೆ. ಉಳಿದ 74 ಫಲಾನುಭಿಗಳ ಮಾಹಿತಿ ನಮೂದಿಸಲು ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿರುವುದಿಲ್ಲ. ಪರಿಶಿಷ್ಟ ಪಂಗಡದ 6 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 3 ಫಲಾನುಭವಿಗಳ ಅರ್ಹತೆ ಇರುವುದಿಲ್ಲ ಎಂದು ಹೇಳಿದರು. ರಾಜ್ಯ ಎಸ್‍ಸಿ, ಎಸ್‍ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಕ್ರೈಸ್ ವಸತಿ ಶಾಲೆ ಮತ್ತು ಆಶ್ರಮ ಶಾಲೆಯಲ್ಲಿ ಶೇ.10ರಷ್ಟು ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂಬ ನಿರ್ದೇಶನವಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದರು.ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ 43 ಹಾಗೂ ಹಿಂದುಳಿದ ವರ್ಗದ 513 ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸಭೆಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿಶೇಷ ಕರ್ತವ್ಯಾಧಿಕಾರಿ ಆನಂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಇದ್ದರು.