ಜಿಲ್ಲಾ ಮಟ್ಟದ ವಲಯವಾರು ಉಪ ಸಮಿತಿಗಳ ಸಭೆ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಉದ್ದೇಶದಿಂದ ದೂರದೃಷ್ಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತಂತೆ ಅಧಿಕಾರಿಗಳು ಸಮಗ್ರ ವರದಿ ತಯಾರಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಮಿಪ್ರಿಯಾ ಸೂಚಿಸಿದರು.
ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031 ವರದಿಗಳ ಮಾಹಿತಿಯನ್ನು ಅಂತಿಮಗೊಳಿಸುವ ಕುರಿತ ಜಿಲ್ಲಾ ಮಟ್ಟದ ವಲಯವಾರು ಉಪ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತಂತೆ ಅಧಿಕಾರಿಗಳು ದೂರದೃಷ್ಟಿ ಹೊಂದಿದ್ದು, ತಮ್ಮ ಇಲಾಖೆಯ ಪ್ರಸ್ತಾವಗಳು ಮತ್ತು ಅಗತ್ಯತೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಂಡು ಜಿಲ್ಲೆಗೆ ಸಂಬಂಧಪಟ್ಟ ಇಲಾಖೆಯ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗ ಆ ಬೇಡಿಕೆಗಳನ್ನು ಅವರ ಗಮನಕ್ಕೆ ತರುವುದರ ಮೂಲಕ ಯೋಜನೆಗಳು ಶೀಘ್ರವಾಗಿ ಮಂಜೂರಾಗಿ, ಯೋಜನೆಗಳು ಅನುಷ್ಠಾನಗೊಂಡು ಸಾರ್ವಜನಿಕರಿಗೆ ತಲುಪಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031 ವರದಿಗಳ ಕುರಿತಂತೆ ವಿವಿಧ ಇಲಾಖೆಗಳ ಅಂಕಿ-ಅಂಶಗಳು ಹಾಗೂ ಸೂಚಕಗಳನ್ನು ಪರಿಶೀಲಿಸಿ, ಅವುಗಳಲ್ಲಿನ ಲೋಪಗಳನ್ನು ಸರಿಪಡಿಸಿ ವರದಿ ಸಲ್ಲಿಸುವಂತೆ ತಿಳಿಸಿದ ಅವರು, ತಾಪಂ ಮತ್ತು ಗ್ರಾಪಂಗಳಿಗೆ ಬಂದಿರುವ ಒಟ್ಟು ಅನುದಾನ ಮತ್ತು ಆದಾಯದ ಅಂಕಿ-ಅಂಶಗಳನ್ನು ಮರು ಸರಿಪಡಿಸಬೇಕು ಹಾಗೂ ಸರ್ಕಾರದಿಂದ ಬರುವ ಅನುದಾನವೂ ಸೇರಿದಂತೆ ಒಟ್ಟು ಆದಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಹಾಗೂ ತಾಲೂಕು ಅಧಿಕಾರಿಗಳು ಈ ದತ್ತಾಂಶವನ್ನು ಇನ್ನೊಮ್ಮೆ ಪರಿಶೀಲಿಸಬೇಕು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, 2018ರ ಸಮೀಕ್ಷೆ ಆಧಾರಿತ ದತ್ತಾಂಶ ಹಾಗೂ ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿರುವ ವಸತಿ ರಹಿತರು ಮತ್ತು ನಿವೇಶನ ರಹಿತರ ಸಂಖ್ಯೆಯನ್ನು ಪರಿಶೀಲಿಸಿ, ನಿಖರವಾದ ಪ್ರಸಕ್ತ ಮಾಹಿತಿಯನ್ನು ನಮೂದಿಸುವಂತೆ ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಎಂ.ಎಸ್. ಅಲ್ಲಾಬಕ್ಷ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ ಇದರು.