ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸಿ

| Published : Nov 21 2025, 02:30 AM IST

ಸಾರಾಂಶ

ಪಾಲಕರ ಸಭೆ ಮಕ್ಕಳ ಮನೆ ಭೇಟಿ ಮಾಡಿ ಸಮುದಾಯದ ಸಹಕಾರ ಪಡೆದು ಕಡಿಮೆ ಹಾಜರಾತಿ ಇರುವ ಮಕ್ಕಳು ನಿರಂತರ ತರಗತಿಗೆ ಹಾಜರಾಗುವಂತೆ ಕ್ರಮವಹಿಸುವುದು

ಕುಷ್ಟಗಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ 100 ದಿನದ ವಿಶೇಷ ಕ್ರಿಯಾ ಯೋಜನೆ ರೂಪಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಗೊಳಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಸೂಚಿಸಿದರು.

ಪಟ್ಟಣದ ಗುರುಭವನದಲ್ಲಿ ನಡೆದ ಕುಷ್ಟಗಿ ತಾಲೂಕಿನ ಎಲ್ಲ ಸರ್ಕಾರಿ ಅನುದಾನ ರಹಿತ ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರೂಪಣಾತ್ಮಕ-1,2 ಹಾಗೂ ಸಂಕಲನಾತ್ಮಕ ಪರೀಕ್ಷೆ 1 ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆ ಮಾಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉಳಿದ ಮೂರು ತಿಂಗಳಿಗೆ ವಿಶೇಷ ಮೈಕ್ರೋ ಯೋಜನೆ ರೂಪಿಸಿ ಬೆಳಗಿನ 1ಗಂಟೆ ಹಾಗೂ ಸಂಜೆ 1ಗಂಟೆ ವಿಶೇಷ ತರಗತಿ ನಡೆಸಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲು ಸೂಚಿಸಿದರು.ಇಲಾಖೆ ನಿರ್ದೇಶಿಸಿರುವ 29 ಅಂಶಗಳನ್ನು ಜಾರಿಗೊಳಿಸಲು ವಿಫಲರಾದರೆ ಮುಖ್ಯ ಶಿಕ್ಷಕರನ್ನು ನೇರಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಪಾಲಕರ ಸಭೆ ಮಕ್ಕಳ ಮನೆ ಭೇಟಿ ಮಾಡಿ ಸಮುದಾಯದ ಸಹಕಾರ ಪಡೆದು ಕಡಿಮೆ ಹಾಜರಾತಿ ಇರುವ ಮಕ್ಕಳು ನಿರಂತರ ತರಗತಿಗೆ ಹಾಜರಾಗುವಂತೆ ಕ್ರಮವಹಿಸುವುದು, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೂ ವಿಶೇಷ ತರಗತಿ, ಸಹವರ್ತಿ ಕಲಿಕೆ, ವೆಕಪ್ ಕಾಲ್, ಘಟಕ ಪರೀಕ್ಷೆ ನಡೆಸಿ ಈಗಿನಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಲು ಕ್ರಮ ವಹಿಸಲು ತಿಳಿಸಿದರು.

ನ. 22ರಂದು ತಾಲೂಕಿನ ಎಲ್ಲ ಪ್ರೌಢ ಶಾಲೆಗಳ ಶಿಕ್ಷಕರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ಪ್ರಧಾನ ಕಾರ್ಯದರ್ಶಿಗಳ ಸೂಚನೆಯಂತೆ ಫಲಿತಾಂಶ ಸುಧಾರಣಾ ಕಾರ್ಯಗಾರ ಕುಷ್ಟಗಿ ತಾಲೂಕಿನ ತುಳುವಗೇರಾ ಆದರ್ಶ ವಿದ್ಯಾಲಯ ಹಾಗೂ ಪ್ರೌಢಶಾಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಂಡಿದ್ದು,ಎಲ್ಲ ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಕಾರ್ಯಾಗಾರಕ್ಕೆ ಹಾಜರಾಗಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ನೂರರಷ್ಟು ಫಲಿತಾಂಶ ಸಾಧಿಸಲು ಸೂಚಿಸಿದರು.

ಸಭೆಗೆ ತಡವಾಗಿ ಬಂದ ಹಾಗೂ ಗೈರಾದ 13 ಜನ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ವರದಿ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಬಿಇಒ ಉಮಾದೇವಿ ಬಿ ಬಸಾಪುರ ಮಾತನಾಡಿ, ಇಲಾಖೆ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆ, ನೀಲ ನಕ್ಷೆ, ಸಂಭಾವ್ಯ ಪ್ರಶ್ನೆಪತ್ರಿಕೆ ಮಕ್ಕಳಿಗೂ ನೀಡಿ ಅಭ್ಯಾಸ ಮಾಡಲು ಕ್ರಮವಹಿಸಲು ಜಿಲ್ಲೆಯ ಕಳೆದ ಸಾಲಿನ 32ನೇ ಸ್ಥಾನದ ಹಣೆಪಟ್ಟಿ ಕಳಚಿ ಉತ್ತಮ ಫಲಿತಾಂಶ ತರುವಲ್ಲಿ ಎಲ್ಲ ಮುಖ್ಯ ಶಿಕ್ಷಕರು ನಿರಂತರವಾಗಿ ಕಾರ್ಯ ಪ್ರವೃತ್ತರಾಗಲು ಸೂಚಿಸಿದರು.

ಈ ಸಭೆಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಧಿಕಾರಿ ಜಗದೀಶ್ ಮೇಣೆದಾಳ, ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಮಹಾಂತಯ್ಯ ಸೊಪ್ಪಿಮಠ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಎಂ.ಗೊಣ್ಣಾಗರ್, ಕಾರ್ಯದರ್ಶಿ ಯಮನಪ್ಪ ಚೂರಿ ಹಾಗೂ ಡಯಟ್ ಉಪನ್ಯಾಸಕ ಎಂ.ಬಿ.ಸವದತ್ತಿ, ತಾಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಮಹಮ್ಮದ್ ಇಸಾಕ್, ಬಿಆರ್ ಪಿ ಲೋಕೇಶ್, ಶಿಕ್ಷಣ ಸಂಯೋಜಕ ರಾಗಪ್ಪ ಸೇರಿದಂತೆ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.