ಸಾರಾಂಶ
- ಪಥ ಸಂಚಲನದಲ್ಲಿ ಪೌರಕಾರ್ಮಿಕರಿಗೂ ಅವಕಾಶ: ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಈ ಬಾರಿಯ 79ನೇ ಸ್ವಾತಂತ್ರ‍್ಯ ದಿನ ಕಾರ್ಯಕ್ರಮವನ್ನು ಆಗಸ್ಟ್ 15ರಂದು ವಿಭಿನ್ನ, ಅದ್ಧೂರಿಯಾಗಿ ಆಚರಿಸಲಾಗುವುದು. ಕಳೆದ ವರ್ಷಕ್ಕಿಂತ ಹೆಚ್ಚಿನ ಸಡಗರ, ಸಂಭ್ರಮದೊಂದಿಗೆ ಆಚರಿಸೋಣ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ವಾತಂತ್ರ‍್ಯ ದಿನಾಚರಣೆ ಕುರಿತಂತೆ ಅಗತ್ಯ ಸಿದ್ಧತೆಗಳ ಕೈಗೊಳ್ಳಲು ಏರ್ಪಡಿಸಲಾದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆ.15ರಂದು ಬೆಳಗ್ಗೆ 7.50 ಗಂಟೆಗೆ ಡಿಸಿ ಕಚೇರಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ‍್ಯ ದಿನ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಸಮಾರಂಭಕ್ಕೆ ಶಿಷ್ಟಾಚಾರದಂತೆ ಎಲ್ಲ ಗಣ್ಯರು, ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ವೇದಿಕೆ ನಿರ್ಮಾಣ, ಅಲಂಕಾರ ಸಮರ್ಪಕ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.ಸ್ವಾತಂತ್ರ್ಯ ದಿನ ಅಂಗವಾಗಿ ಎಲ್ಲ ಸರ್ಕಾರಿ ಕಟ್ಟಡಗಳಿಗೆ ಆ.14 ಮತ್ತು 15ರಂದು ವಿದ್ಯುತ್ ದೀಪಾಲಂಕಾರ ಮಾಡಬೇಕು. ಗ್ರಾಮ, ತಾಲೂಕು, ಜಿಲ್ಲಾಮಟ್ಟದ ಎಲ್ಲ ಇಲಾಖೆಗಳ ಕಚೇರಿಗಳಲ್ಲೂ ರಾಷ್ಟ್ರ ಧ್ವಜಾರೋಹಣ ನಿಯಮಾನುಸಾರ ನೆರವೇರಿಸಬೇಕು. ಸಮಾರಂಭದ ಪರೇಡ್‌ನಲ್ಲಿ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಜೊತೆಗೆ ವಿಶೇಷವಾಗಿ ಪೌರಕಾರ್ಮಿಕರು, ಗ್ರಾಮ ಆಡಳಿತ ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಲು ತಿಳಿಸಿ, ಇದಕ್ಕೆ ಬೇಕಾದ ಸಿದ್ಧತೆ ನಡೆಸಲು ಸೂಚನೆ ನೀಡಿದರು.
ಬೆಳಗಿನ ಕಾರ್ಯಕ್ರಮ ಸಂದರ್ಭ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು. ಸಮಾರಂಭದಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಎಲ್ಲರಿಗೂ ಆಸನ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಸಮನ್ವಯತೆಯೊಂದಿಗೆ ಸಮರ್ಪಕ ನಿರ್ವಹಿಸಿ, ಪ್ರತಿ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಹುಲಿಮನಿ ತಿಮ್ಮಣ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- - -(ಬಾಕ್ಸ್) * ಪ್ಲಾಸ್ಟಿಕ್ ಧ್ವಜ ಮಾರಾಟ, ಬಳಕೆ ನಿಷೇಧ
ಜಿಲ್ಲಾದ್ಯಂತ ಯಾವುದೇ ಅಂಗಡಿ ಮುಂಗಟ್ಟು, ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ಹಾಗೂ ಬೈಕ್, ಆಟೋ ಇನ್ನಿತರೆ ವಾಹನಗಳಿಗೆ ಬಳಕೆ ಸಹ ಸಂಪೂರ್ಣ ನಿಷೇಧಿಸಿದೆ. ವಾಹನಗಳ ಮೇಲೆ ರಾಷ್ಟ್ರಧ್ವಜ ಬಳಸುವಾಗ ರಾಷ್ಟ್ರಧ್ವಜದ ಸಂಹಿತೆ ಕಾಪಾಡಬೇಕು. ಕಾರ್ಯಕ್ರಮ ನಂತರ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಲ್ಲಿ ಅಥವಾ ಇಂತಹ ದೃಶ್ಯ ಎಲ್ಲಿಯಾದರೂ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಅವರು ಎಚ್ಚರಿಕೆ ನೀಡಿದರು.- - -
-25ಕೆಡಿವಿಜಿ36, 37.ಜೆಪಿಜಿ:ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು.