ಸಾರಾಂಶ
ಚನ್ನಪಟ್ಟಣ: ಕೆಸಿಇಟಿ, ನೀಟ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ೬ನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಾಲು ಪಬ್ಲಿಕ್ ಶಾಲೆಯಲ್ಲಿ ಹೈದರಾಬಾದ್‌ನ ಸಿರಿ ಅಕಾಡೆಮಿ ಸಹಯೋಗದೊಂದಿಗೆ ಸಿರಿರಾಮ್ ಫೌಂಡೇಶನ್ ತರಗತಿಗಳನ್ನು ಆರಂಭಿಸುತ್ತಿದೆ ಎಂದು ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ವಿ.ವೆಂಟಸುಬ್ಬಚೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿ ಮುಗಿಸಿದ ನಂತರ ಯಾವ ಕೋರ್ಸ್ ತೆಗೆದುಕೊಳ್ಳಬೇಕು. ಯಾವ ರೀತಿ ತಯಾರಿ ನಡೆಸಬೇಕು ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳಿರುತ್ತಾರೆ. ಈ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಚನ್ನಪಟ್ಟಣದಲ್ಲಿ ಈ ಒಂದು ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ ಎಂದರು. ಒಲಂಪಿಯಾಡ್, ಎನ್‌ಟಿಎಸ್‌ಇ, ಕೆಎಸ್‌ಇಟಿ, ಎನ್‌ಡಿಎ, ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಚಿಕ್ಕ ವಯಸ್ಸಿನಿಂದಲೇ ಸಜ್ಜುಗೊಳಿಸಲು ಈ ತರಗತಿಗಳನ್ನು ಆಯೋಜಿಸಲಾಗುತ್ತಿದೆ. 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಅನುಗುಣವಾಗಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಬಾಲು ಶಾಲೆಯಲ್ಲಿ ತರಗತಿಗಳು ನಡೆಯಲಿದ್ದು, ಕೋರ್ಸ್‌ಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೇ ಇತರ ಶಾಲೆಯ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂದರು.ಜುಲೈನಿಂದ ಆರಂಭ:
ಸಿರಿ ಅಕಾಡೆಮಿ ಅಧ್ಯಾಪಕರ ತಂಡ ಜುಲೈನಿಂದ ತರಗತಿಗಳು ನಡೆಸಿಕೊಡಲಿದೆ. ಇವರೊಂದಿಗೆ ಐಐಟಿ ಸೇರಿದಂತೆ ಪ್ರಸಿದ್ಧ ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲು ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಠ್ಯಕ್ರಮವನ್ನು ತಯಾರಿಸಲಾಗಿದೆ. ಅಧ್ಯಯನ ಸಾಮಗ್ರಿಯನ್ನು ಸಂಸ್ಥೆಯೇ ಒದಗಿಸಲಿದೆ ಎಂದು ತಿಳಿಸಿದರು.ಸಿರಿ ಅಕಾಡೆಮಿ ಸಂಸ್ಥಾಪಕ ಕೆ.ಎಸ್.ರಾವ್ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ತಾವು ಮುಂದೆ ಏನಾಗಬೇಕು ಎಂಬುದನ್ನು ೫ನೇ ತರಗತಿ ವೇಳೆಗೆ ನಿರ್ಧರಿಸಿ ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಆ ಕುರಿತು ಯೋಚಿಸುತ್ತಾರೆ. ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಜತೆಗೆ ವಿದ್ಯಾರ್ಥಿಗಳಲ್ಲಿ ಒಂದು ಲಕ್ಷ್ಯ ಮೂಡಿಸುವ ನಿಟ್ಟಿನಲ್ಲಿ ತರಗತಿಗಳನ್ನು ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಆಸಕ್ತಿ ಯಾವ ಕ್ಷೇತ್ರದೆಡೆ ಇದೆ ಎಂದು ನಿರ್ಧರಿಸಲು ಅನುಕೂಲವಾಗುತ್ತದೆ ಎಂದರು.
ಐಐಟಿಯಂತಹ ಪ್ರತಿಷ್ಥಿತ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ನಮ್ಮ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಪಿಯುಸಿ ಮತ್ತು ಆ ನಂತರದ ಪಠ್ಯಕ್ರಮದಲ್ಲಿ ಬರುವ ಪಠ್ಯವನ್ನು ಆಧರಿಸಿ ವಿದ್ಯಾರ್ಥಿಗಳನ್ನು ೬ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲಾಗುವುದು ಎಂದರು.ಬಾಲು ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಮಣ್ಯಂ ಮಾತನಾಡಿ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕೋರ್ಸ್ ಆರಂಭಿಸಲಾಗುತ್ತಿದೆ. ವರ್ಷಕ್ಕೆ 8 ಸಾವಿರ ಶುಲ್ಕ ಪಡೆಯಲು ನಿರ್ಧರಿಸಿದ್ದು, ಇದು ಅಧ್ಯಯನ ಸಾಮಗ್ರಿ ಒಳಗೊಂಡಿರಲಿದೆ. ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಲು ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಕೆ.ಪಿ.ಶೈಲಜಾ, ಟ್ರಸ್ಟಿ ಕವಿತಾ ಬಾಲಸುಬ್ರಮಣ್ಯಂ, ಶಾಲೆಯ ಮುಖ್ಯಶಿಕ್ಷಕಿ ಕವಿತಾ, ಆಡಳಿತಾಧಿಕಾರಿ ಮೆಹರ್ ಸುಲ್ತಾನ, ಸಿರಿ ಅಕಾಡೆಮಿ ಸಂಯೋಜಕಿ ರೋಜಾ ಇತರರಿದ್ದರು.ಪೊಟೋ೧ಸಿಪಿಟಿ೧: ಚನ್ನಪಟ್ಟಣದಲ್ಲಿ ವೆಂಕಟಸುಬ್ಬಯ್ಯ ಚೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.