ಸಾರಾಂಶ
ಗದಗ: ಕೋವಿಡ್ ನೂತನ ಜೆಎನ್ 1 ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿವೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಸಮರ್ಪಕ ನಿರ್ವಹಣೆಗೆ ಸರ್ವಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಅವರು ಬುಧವಾರ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ನಿರ್ವಹಣೆಗಾಗಿ ಮಾಡಿಕೊಳ್ಳಲಾದ ವ್ಯವಸ್ಥೆಯನ್ನು ಪರಿಶೀಲಿಸಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಳೆದ ಬಾರಿಯ ಕೋವಿಡ್ ನಿರ್ವಹಣೆಯಲ್ಲಿ ಸೋಂಕಿತರಿಗೆ ಆದ ಆಕ್ಸಿಜನ್ ಪೂರೈಕೆಯ ಸಮಸ್ಯೆಯು ಮರುಕಳಿಸಬಾರದು. ಕೋವಿಡ್ ಚಿಕಿತ್ಸೆಗೆ ಮತ್ತು ಪರೀಕ್ಷೆಗೆ ಅಗತ್ಯವಿರುವ ಸಕಲ ಸಾಮಗ್ರಿಗಳ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ. ಸದ್ಯ ಗದಗ ಜಿಮ್ಸ್‌ನಲ್ಲಿರುವ 115 ವೆಂಟಿಲೇಟರ್‌ಗಳ ಪೈಕಿ 78 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 37 ವೆಂಟಿಲೇಟರ್‌ಗಳು ದುರಸ್ತಿ ಕಾರ್ಯವನ್ನು ಒಂದು ವಾರದೊಳಗಾಗಿ ಕೈಗೊಳ್ಳುವಂತೆ ತಿಳಿಸಲಾಗಿದೆ. ಜಿಮ್ಸ್ ಆವರಣದಲ್ಲಿ 13 ಮತ್ತು 20 ಕೆಎಲ್‍ನ ಆಕ್ಸಿಜನ್ ಸಂಗ್ರಹ ಘಟಕಗಳು ನಿರ್ಮಾಣವಾಗಿವೆ ಹಾಗೂ ಆಕ್ಸಿಜನ್ ಜನರೇಶನ್ ಪ್ಲಾಂಟ್ ಕೂಡ ಕಾರ್ಯನಿರ್ವಹಿಸುತ್ತಿವೆ. ಈ ಆಕ್ಸಿಜನ್ ಜನರೇಶನ್ ಪ್ಲಾಂಟ್‍ನಿಂದ ಸಿಲಿಂಡರ್‌ಗೆ ಆಕ್ಸಿಜನ್ ತುಂಬಿಸಲು ಇರುವ ಸಾಧನ ಸಾಮಗ್ರಿಗಳನ್ನು ಶೀಘ್ರವೇ ಖರೀದಿಸಿ ಅಳವಡಿಕೆ ಮಾಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿರುವ ಆಕ್ಸಿಜನ್ ಸಂಗ್ರಹಕ್ಕಾಗಿ ಜಿಮ್ಸ್‌ನಲ್ಲಿ 200 ಜಂಬೂ ಸಿಲಿಂಡರ್ ಇವೆ. ಜತೆಗೆ 10 ಹಾಗೂ 5 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಸಹ ಲಭ್ಯವಿದ್ದು, ಸೋಂಕಿತರ ಚಿಕಿತ್ಸೆಗೆ ಅಗತ್ಯಕ್ಕೆ ತಕ್ಕಂತೆ ಬಳಕೆಗೆ ಸೂಚಿಸಲಾಗಿದೆ. ಜಿಮ್ಸ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆಗಾಗಿ 50 ಬೆಡ್, ತಾಲೂಕು ಆಸ್ಪತ್ರೆ ಮತ್ತು ಸಿಎಚ್‍ಸಿ ಆಸ್ಪತ್ರೆಗಳಲ್ಲಿ ತಲಾ 10 ಬೆಡ್‍ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗುವುದು. ಅಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದರು. ಕೋವಿಡ್ ಸಂಬಂಧಿತ ಮಾಹಿತಿಗಾಗಿ ಸಹಾಯವಾಣಿ ಶೀಘ್ರವೇ ಆರಂಭಿಸಲಾಗುವುದು. ಜನಸಾಮಾನ್ಯರಿಗೆ ಕೋವಿಡ್ ಸೋಂಕಿನ ಚಿಕಿತ್ಸೆ ಸಮರ್ಪಕವಾಗಿ ದೊರೆಯಬೇಕು. ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಸುದ್ದಿ ಮಾಧ್ಯಮಗಳೂ ಕೋವಿಡ್ ಸಂಬಂಧಿತ ಊಹಾಪೋಹ ಸುದ್ದಿಗಳನ್ನು ಪ್ರಸಾರ ಮಾಡಬಾರದು. ಅಧಿಕೃತ ಮಾಹಿತಿಯನ್ನಷ್ಟೇ ಪ್ರಸಾರ ಮಾಡುವಂತೆ ಕೋರಿದ ಅವರು, ಜಿಲ್ಲೆಯಲ್ಲಿ ಪ್ರತಿದಿನ 100 ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಲ್ಲಿ 70 ಆರ್‌ಟಿಪಿಸಿಆರ್ ಹಾಗೂ 30 ರ‍್ಯಾಟ್ ಪರೀಕ್ಷೆ ಒಳಗೊಂಡಿರುತ್ತದೆ. ಜಿಲ್ಲೆಯಲ್ಲಿ ಸದ್ಯ 2 ಪ್ರಕರಣಗಳು ಶಂಕಾಸ್ಪದ ಎಂದು ಗುರುತಿಸಲಾಗಿದ್ದು, ಪರೀಕ್ಷಾ ವರದಿ ನಾಳೆ ಬರಲಿದೆ. ಕೋವಿಡ್ ಪರೀಕ್ಷೆಗೆ ಅಗತ್ಯವಿರುವ ನುರಿತ ಸಿಬ್ಬಂದಿಯನ್ನು ಅಗತ್ಯಕ್ಕನುಸಾರ ತೆಗೆದುಕೊಳ್ಳಬೇಕು ಹಾಗೂ ಚಿಕಿತ್ಸೆಗಾಗಿ ಎನ್‍ಎಚ್‍ಎಂನಿಂದ ನೇಮಕವಾದ ನರ್ಸ್‌ಗಳನ್ನು ಒಂದು ವಾರದೊಳಗಾಗಿ ಒದಗಿಸಲಾಗುವುದು. ಸೋಂಕಿತರ ಪ್ರಮಾಣ ಅಧಿಕವಾದಲ್ಲಿ ಜಿಲ್ಲಾಸ್ಪತ್ರೆಯ ಭದ್ರತೆಗಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನೇಮಕಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ ಉಪಸ್ಥಿತರಿದ್ದರು.