ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ಬಿಇಒ ಸೈಯದ್ ಮೋಸಿನ್

| Published : May 24 2024, 12:49 AM IST

ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ಬಿಇಒ ಸೈಯದ್ ಮೋಸಿನ್
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ಪಟ್ಟಣದ ತೋಟದ ರಾಮಯ್ಯ ಗಂಗಾಂಬಿಕೆ ಪ್ರೌಢಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕುರಿತ ಮುಖ್ಯ ಶಿಕ್ಷಕರ ಸಭೆಯನ್ನು ಬಿಇಒ ಸೈಯದ್ ಮೋಸಿನ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮೇ. 31 ರಿಂದ ಪ್ರಾರಂಭಗೊಳ್ಳಲಿದ್ದು ಮೇ 29 ಮತ್ತು 30ರಂದು ಶಾಲಾ ಪ್ರಾರಂಭೋತ್ಸವದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ತಿಳಿಸಿದರು.

ಅವರು ಪಟ್ಟಣದ ತೋಟದ ರಾಮಯ್ಯ ಗಂಗಾಂಬಿಕೆ ಪ್ರೌಢಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕುರಿತ ಮುಖ್ಯ ಶಿಕ್ಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯ ಸೂಚನೆ ಯಂತೆ ಶಾಲಾ ಸ್ವಚ್ಛತಾ ಕಾರ್ಯ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು. ತರಗತಿ / ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ, ಆಹಾರ ಧಾನ್ಯಗಳ ಸ್ವಚ್ಛತೆ ಮತ್ತು ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸುವಂತೆ ತಿಳಿಸಿದರು.

ಮೇ 29ರಂದು ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಾಲಾ, ತರಗತಿ, ಶಿಕ್ಷಕರ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರು ಪಾಠ ಯೋಜನೆ ತಯಾರಿಸಿಕೊಳ್ಳುವುದು. ಶಾಲಾಭಿವೃದ್ಧಿ ಯೋಜನೆ, ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾಥಾ, ಪ್ರಭಾತ್ ಪೇರಿ, ಮನೆ ಭೇಟಿ ಮುಂತಾದ ಕ್ರಮಗಳನ್ನು ಹಮ್ಮಿಕೊಳ್ಳುವುದು. ಮೇ 31ರಂದು ಮಕ್ಕಳಿಗೆ ಸಿಹಿ ಊಟ ವಿತರಿಸಿ ಪ್ರಾರಂಭೋತ್ಸವ ಮಾಡಬೇಕು. ಶಾಲಾರಂಭದ ದಿನವೇ ಉಚಿತ ಪಠ್ಯಪುಸ್ತಕ ಮತ್ತು ಸಮವಸಗಳನ್ನು ವಿತರಿಸಬೇಕು. ಜೂ.1ರಿಂದ 30ರವರೆಗೆ ಸೇತುಬಂಧ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಿದರು.

ಅಕ್ಷರ ದಾಸೋಹ ತಾಲೂಕು ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಅಕ್ಷರ ದಾಸೋಹ ಕೊಠಡಿ ದುರಸ್ತಿ ಮಾಡಲಾಗುವುದು. ಮೇ 31ರಂದು ಬಿಸಿಯೂಟ ನೀಡುವ ಮೂಲಕ ಪ್ರಾರಂಭೋತ್ಸವ ಯಶಸ್ವಿಗೊಳಿಸಿ ಎಂದರು.

ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ತಿಪ್ಪೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಬಿ ಆರ್ ಪಿ ರುದ್ರೇಶ್, ಶಿಕ್ಷಣ ಸಂಯೋಜಕ ಚಂದ್ರಶೇಖರ, ಯತೀಶ್ ಹಾಜರಿದ್ದರು.