ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಸ್ಥಳಗಳಿಂದ ಆಗಮಿಸುವ ಕನ್ನಡದ ಅಭಿಮಾನಿಗಳಿಗೆ ಅಗತ್ಯವಿರುವ ಸ್ಥಳಗಳ ಬಗ್ಗೆ ಯಾವುದೇ ಗೊಂದಲವಿಲ್ಲದೆ ತಿಳಿದುಕೊಳ್ಳಲು ರೂಟ್ ಮ್ಯಾಪ್ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿ, ರೂಟ್ ಮ್ಯಾಪ್‌ಗಳನ್ನು ಮುಖ್ಯ ರಸ್ತೆಗಳಲ್ಲಿ ಹೆಚ್ಚು ಜನರಿಗೆ ಮಾಹಿತಿ ನೀಡುವ ಸ್ಥಳಗಳಲ್ಲಿ ಅನಾವರಣಗೊಳಿಸಬೇಕು. ಸಾಹಿತ್ಯ ಸಮ್ಮೇಳನಕ್ಕೆ ನಗರದ ಮುಖ್ಯ ಬಸ್ ನಿಲ್ದಾಣ ಹಾಗೂ ಪಾರ್ಕಿಂಗ್ ಸ್ಥಳದಿಂದ ಮಾಡುವ ಉಚಿತ ಬಸ್ ಸೇವೆಯ ಬಸ್‌ಗಳ ಮೇಲೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಚಿತ ಬಸ್ ಸೇವೆ ಎಂದು ಸ್ಟಿಕ್ಕರ್ ಅಳವಡಿಸುವಂತೆ ಸೂಚಿಸಿದರು.
ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನೋಂದಣಿಯಾಗುವ ಪ್ರತಿನಿಧಿಗಳಿಗೆ ವಸತಿ ಒದಗಿಸುವ ಸ್ಥಳದ ಹತ್ತಿರದ ಭಾಗದಿಂದ ಬಸ್ ವ್ಯವಸ್ಥೆ ಮಾಡಬೇಕು. ಇವುಗಳಿಗೆ ಬೇಕಿರುವ ಸೂಚನಾ ಫಲಕಗಳನ್ನು ಸಿದ್ಧಪಡಿಸಿಕೊಂಡು ಅನಾವರಣ ಮಾಡುವುದು. ಸಾರಿಗೆ ಸಂಸ್ಥೆಯಿಂದ ರಾಜ್ಯದ ವಿವಿಧ ಭಾಗಗಳಿಂದ ಬರುವ ಜನರಿಗೆ ಜಾತ್ರೆ ಸಂದರ್ಭದಲ್ಲಿ ಮಾಡುವ ವಿಶೇಷ ಬಸ್ ರೀತಿ ಸಾಹಿತ್ಯ ಸಮ್ಮೇಳನಕ್ಕೂ ಮಾಡಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಬಸ್‌ಗಳು ದುರಸ್ತಿಗೆ ಒಳಗಾದ ಸಂದರ್ಭದಲ್ಲಿ ತಕ್ಷಣ ತೆರವುಗೊಳಿಸಲು ಎರಡು ಟೋಯಿಂಗ್ ವಾಹನಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರಲ್ಲದೇ, ಸಮ್ಮೇಳನದ ಸ್ಥಳದ ಮುಖ್ಯ ದ್ವಾರದಲ್ಲಿ ಸಹಾಯವಾಣಿ ಕಿಯೋಸ್ಕ್‌ಗೆ ಇಬ್ಬರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಿಗೆ ಬಸ್‌ಗಳ ಬಗ್ಗೆ ಮಾಹಿತಿ ಒದಗಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಗಂಗಾಧರ ಸ್ವಾಮಿ ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಸಭೆಗೂ ಮುನ್ನ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರುಗಳು ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ವಸತಿ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ಶಶಿ ಕಿರಣ ಸಮುದಾಯ ಭವನ, ಚೈತನ್ಯ ಟೆಕ್ನೋ ಶಾಲೆ, ಮಾಂಡವ್ಯ ಕಾಲೇಜು ಸೇರಿದಂತೆ ಇನ್ನಿತರೆ ಸ್ಥಳ ಪರಿಶೀಲಿಸಿದರು.
ಪ್ರತಿನಿಧಿಗಳಿಗೆ ಜಿಲ್ಲೆಯನ್ನು ನೆನೆಯಲು ಸಿಹಿ ಬೆಲ್ಲಕನ್ನಡಪ್ರಭ ವಾರ್ತೆ. ಮಂಡ್ಯ
೮೭ ನೇ ಅಖಿಲ ಭಾರತ ಕನ್ಮಡ ಸಾಹಿತ್ಯ ಸಮ್ನೇಳನದಲ್ಲಿ ಪ್ರತಿನಿಧಿಯಾಗಿ ನೋಂದಣಿಯಾಗುವ ಸದಸ್ಯರಿಗೆ ಮಂಡ್ಯ ಜಿಲ್ಲೆಯ ಸವಿ ನೆನಪಿಗಾಗಿ ಬೆಲ್ಲವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಲ್ಲ ತಯಾರಿಕೆ ಎಫ್‌ಪಿಒ ಘಟಕಗಳ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿನಿಧಿಗಳಿಗೆ ಬೆಲ್ಲ ನೀಡುವುದರಿಂದ ಜನರಿಗೆ ಬೆಲ್ಲದ ಬಗ್ಗೆ ಹೆಚ್ಚಿನ ಪ್ರಚಾರವಾಗುತ್ತದೆ ಎಂದರು.
ಸುಮಾರು ೧೦,೦೦೦ ಜನರು ನೋಂದಣಿಯಾಗುವ ನಿರೀಕ್ಷೆ ಇದೆ. ಪ್ರತಿನಿಧಿಗಳಿಗೆ ಹಾಗೂ ಗಣ್ಯರಿಗೆ ಅರ್ಧ ಕೆ.ಜಿ ಬೆಲ್ಲ ನೀಡಿದರೆ ಸುಮಾರು ೬ ರಿಂದ ೭ ಸಾವಿರ ಕೆ.ಜಿ.ಬೆಲ್ಲ ಬೇಕಾಗುತ್ತದೆ. ಬೆಲ್ಲ ತಯಾರಿಕೆ ಘಟಕಗಳು ಉತ್ತಮವಾಗಿ ಪ್ಯಾಕೇಜ್ ಮಾಡಿ ಅದರ ಮೇಲೆ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಮುದ್ರಣ ಸೇರಿದಂತೆ ಒಂದೇ ರೀತಿ ಪ್ಯಾಕೇಜ್ ಮಾಡಿ ನೀಡಬೇಕು. ಉತ್ತಮ ದರ ನಿಗದಿ ಮಾಡಿ ಬೆಲ್ಲ ನೀಡಲು ಮುಂದೆ ಬರುವವರು ಕೃಷಿ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಗುಣಮಟ್ಟದ ಬೆಲ್ಲವನ್ನು ನೀಡಿ ಇದರಿಂದ ಜಿಲ್ಲೆಯ ಹೆಸರು ಎಲ್ಲಾ ಕಡೆ ಪಸರಿಸುತ್ತದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಂಟಿ ಕೃಷಿ ನಿರ್ದೇಶಕ ಅಶೋಕ್ ಸೇರಿದಂತೆ ಎಫ್. ಪಿ.ಓ ಘಟಕಗಳ ಮುಖ್ಯಸ್ಥರಾದ ಮಹದೇವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.