ಬಿಸಿ ಗಾಳಿಯಿಂದಾಗುವ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಿ: ಡಿಸಿ ಕೆ.ಲಕ್ಷ್ಮೀಪ್ರಿಯಾ

| Published : Mar 12 2025, 12:51 AM IST

ಬಿಸಿ ಗಾಳಿಯಿಂದಾಗುವ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಿ: ಡಿಸಿ ಕೆ.ಲಕ್ಷ್ಮೀಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ಹೀಟ್ ವೇವ್ ಸಂದರ್ಭದಲ್ಲಿ ಹೊರಾಂಗಣದಲ್ಲಿ ಯಾವುದೇ ಬೇಸಿಗೆ ಶಿಬಿರ, ಎನ್.ಸಿ.ಸಿ., ಎನ್.ಎಸ್.ಎಸ್ ಶಿಬಿರ ಚಟುವಟಿಕೆ ನಡೆಸಬಾರದು.

ಕಾರವಾರ: ಕೆಲವು ದಿನಗಳಿಂದ ಜಿಲ್ಲೆಯ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆಯ ವಾತಾವರಣ ಕಂಡು ಬರುತ್ತಿದ್ದು, ಇದರಿಂದ ಉಂಟಾಗುವ ಉಷ್ಣ ಗಾಳಿಯ ಪರಿಣಾಮದಿಂದ ಅನಾರೋಗ್ಯಕ್ಕೆ ಒಳಗಾಗುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆಯಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಸಿ ಗಾಳಿಯ ಪರಿಣಾಮ ಹೀಟ್ ವೇವ್ ಸ್ಟ್ರೋಕ್ ನಿಂದ ಬಳಲುವವರಿಗೆ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ,ತಾಲೂಕು ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ಬೆಡ್‌ ಮೀಸಲಿಡಬೇಕು. ಚಿಕಿತ್ಸಾ ಕೊಠಡಿಯಲ್ಲಿ ತಂಪು ವಾತಾವರಣ ಇರುವಂತೆ ಕೂಲರ್, ಫ್ಯಾನ್ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಹೀಟ್ ವೇವ್ ಸಂದರ್ಭದಲ್ಲಿ ಹೊರಾಂಗಣದಲ್ಲಿ ಯಾವುದೇ ಬೇಸಿಗೆ ಶಿಬಿರ, ಎನ್.ಸಿ.ಸಿ., ಎನ್.ಎಸ್.ಎಸ್ ಶಿಬಿರ ಚಟುವಟಿಕೆ ನಡೆಸಬಾರದು. ಬಿಸಿ ಗಾಳಿಯ ಪರಿಣಾಮಗಳ ಕುರಿತಂತೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸುವಂತೆ ಮತ್ತು ಬಿಸಿ ಗಾಳಿ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕರಪತ್ರ ವಿತರಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರು ಹೊರಗಡೆ ಓಡಾಡುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೋಪಿ ಧರಿಸುವುದು, ಛತ್ರಿ ಬಳಸುವುದು ಮತ್ತು ಸಾಧ್ಯವಾದಷ್ಟು ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಓಡಾಡುವುದನ್ನು ಕಡಿಮೆಗೊಳಿಸಬೇಕು. ಬಿಸಿಲಿನಲ್ಲಿ ಶ್ರಮದಾಯಕ ಕೆಲಸ ಮಾಡಬಾರದು. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆಗಾಗ್ಗೆ ನೀರು ಕುಡಿಯುವ ಮೂಲಕ ದೇಹವು ನಿರ್ಜಲೀಕರಣವಾದಂತೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಬಿ.ವಿ., ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಮೋಹನಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಅರ್ಚನಾ ನಾಯಕ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕ್ಯಾ. ರಮೇಶ ರಾವ್, ಜಿಲ್ಲಾ ಆರ್.ಸಿ.ಎಚ್.ಒ ಡಾ. ನಟರಾಜ್ ಮೊದಲಾದವರು ಇದ್ದರು.