ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಮೈಸೂರು ದಸರಾ ಮಾದರಿಯಲ್ಲೇ ಸ್ಥಳೀಯವಾಗಿ ದಸರಾ ಹಬ್ಬವನ್ನು ಉತ್ಸವದಂತೆ ಅದ್ಧೂರಿಯಾಗಿ ಆಚರಿಸಲು ನಗರದ ಕೋಟೆ ಪ್ರದೇಶದ ಪಿನಾಕಿನಿ ಯೂಥ್ಸ್ ಬಳಗ ನಿರ್ಧರಿಸಿದೆ.ನಗರದ ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯದಲ್ಲಿ ನಡೆದ ನವರಾತ್ರಿ ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಶಾಸಕ ಕೆ. ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ದಸರಾ ನಮ್ಮ ನಾಡ ಹಬ್ಬವಾಗಿದೆ. ಕರ್ನಾಟಕದ ಕೀರ್ತಿ ಹೆಚ್ಚಿಸುವ ಹಬ್ಬವನ್ನು ಚಾಮುಂಡೇಶ್ವರಿ, ದುರ್ಗಾ ಮಾತೆಯರನ್ನು ಪೂಜಿಸುವ ಮೂಲಕ ಮೊದಲಿನಿಂದಲೂ ಸಡಗರ- ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸ್ಥಳೀಯ ಪಿನಾಕಿನಿ ಯೂಥ್ಸ್ ಬಳಗ ಕೂಡ ಇದೇ ಮೊದಲ ಬಾರಿ ಒಂಬತ್ತು ದಿನಗಳ ಕಾಲ ಅದ್ಧೂರಿಯಾಗಿ ನವರಾತ್ರಿ ಉತ್ಸವವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದೆ. ಗೌರಿಬಿದನೂರು ತಾಲೂಕು ಎಲ್ಲ ಹಬ್ಬಗಳನ್ನು ಭಕ್ತಿ, ಭಾವದಿಂದ ಆಚರಿಸುವುದಕ್ಕೆ ಹೆಸರಾಗಿದೆ. ಇಲ್ಲಿನ ಹಿಂದೂ- ಮುಸ್ಲಿಂ ಸೌಹಾರ್ದತೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅಣ್ಣ- ತಮ್ಮಂದಿರಂತೆ ಬದುಕನ್ನು ರೂಪಿಸಿಕೊಂಡಿದ್ದಾರೆ. ಅದೇ ರೀತಿ ಎಲ್ಲರೂ ಒಗ್ಗೂಡಿ 9 ದಿನಗಳ ನವರಾತ್ರಿ ಉತ್ಸವವನ್ನು ಆಚರಿಸಬೇಕು. ನಾನು ಅಗತ್ಯ ಸಹಕಾರವನ್ನು ನೀಡುತ್ತೇನೆ ಎಂದರು.ದಸರಾ ಉತ್ಸವದ ಉಸ್ತುವಾರಿ ವಹಿಸಿರುವ ಒರಿಸ್ಸಾ ಮೂಲದ ಅರ್ಚಕ ಸಫನ್ ದಾಸ್ ಮಾತನಾಡಿ, ಇದೇ ಮೊದಲ ಬಾರಿ ನಗರದಲ್ಲಿ ದುರ್ಗಾದೇವಿ ಪ್ರತಿಷ್ಠಾಪನೆ ಜೊತೆಗೆ ಶಕ್ತಿ ದೇವತೆಗಳ ಆರಾಧನೆಯೊಂದಿಗೆ 9 ದಿನಗಳ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯನ್ನು ಯುವಕರು ಮುಂದೆ ನಿಂತು ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಮುಖಂಡ ಆರ್.ಅಶೋಕ್ ಕುಮಾರ್ ಮಾತನಾಡಿ, ಕೋಟೆ ಪ್ರದೇಶದ ಯುವಕರು ಶ್ರದ್ಧೆ, ಭಕ್ತಿ ಹಾಗೂ ಅದ್ಧೂರಿಯಾಗಿ ದಸರಾ ಆಚರಿಸಲು ಮುಂದಾಗಿರುವುದು ಖುಷಿಯ ವಿಚಾರ. ಯುವಕರ ಪ್ರಯತ್ನವನ್ನು ಎಲ್ಲರೂ ಪ್ರೋತ್ಸಾಹಿಸಿ ಉತ್ಸವ ಯಶಸ್ವಿಯಾಗಲು ಸಹಕರಿಸಬೇಕು ಎಂದರು.ನಗರಸಭೆ ಸದಸ್ಯರಾದ ಮಾರ್ಕೆಟ್ ಮೋಹನ್ ಮಾತನಾಡಿದರು.
ಮಂಟಪದ ಸಿದ್ಧತೆ:ವಿದ್ಯುತ್ ದೀಪಾಲಂಕೃತ ವರ್ಣರಂಜಿತ 60 ಅಡಿ ಎತ್ತರದ ಹಾಗೂ100 ಅಡಿ ಅಗಲದ ಮಂಟಪದಲ್ಲಿ ಉತ್ಸವ ನಡೆಯಲಿದ್ದು, ಒರಿಸ್ಸಾದ ಕಲಾವಿದರು ಮಂಟಪವನ್ನು ಸಿದ್ಧಪಡಿಸುತ್ತಿದ್ದಾರೆ.
ನಗರಸಭಾ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಉಪಾಧ್ಯಕ್ಷ ಫರೀದ್, ಪಿನಾಕಿನಿ ಯೂಥ್ಸ್ ಬಳಗದ ವಿ. ಆರ್. ಮಂಜುನಾಥ್ , ಲಕ್ಷ್ಮಣ್, ಕೈಲಾಸ್, ಅರವಿಂದ್ ಬಾಬು, ಹರೀಶ್, ಸುರೇಶ್, ಅನಿಲ್, ರಾಜು ರೆಡ್ಡಿ, ಕಸಾಪ ಮಾಜಿ ಅಧ್ಯಕ್ಷ ವಿ ರವೀಂದ್ರನಾಥ್, ನಗರಸಭಾ ಸದಸ್ಯರಾದ ರಾಜಕುಮಾರ್, ಪದ್ಮಾವತಮ್ಮ,ಶಿಕ್ಷಕರಾದ ಸಂಜೀವ್ ರಾಯಪ್ಪ, ಎನ್. ಆರ್. ಮಂಜುನಾಥ್, ಮುಖಂಡರಾದ ಎಸ್. ಎ. ಸೂರಣ್ಣ, ಎ. ಎನ್. ವೇಣುಗೋಪಾಲ್, ಬಿ. ಜಿ. ವೇಣುಗೋಪಾಲ ರೆಡ್ಡಿ, ಅಸ್ಲಾಂ, ಸಾಮಿಲ್ ಅರುಣ್, ನಾಗಾರ್ಜುನ, ಶ್ರೀನಿವಾಸ್ ಗೌಡ, ಎಸ್ ಬಿ ಶಿವಕುಮಾರ್, ಹೋಟೆಲ್ ರಮೇಶ್ ಸೇರಿ ಇನ್ನಿತರ ಗಣ್ಯರು ಹಾಜರಿದ್ದರು.