ಸಾರಾಂಶ
ಹಲವು ವರ್ಷಗಳಿಂದ ಹಲವು ನಾಯಕರು ಮಹದಾಯಿ ವಿಷಯದಲ್ಲೇ ಮುನ್ನೆಲೆಗೆ ಬಂದು ಈಗ ಹೋರಾಟಗಾರರನ್ನೇ ಮರೆತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕೇವಲ ಆರೋಪ-ಪ್ರತ್ಯಾರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಹುಬ್ಬಳ್ಳಿ:
ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಯ ಕುರಿತು ಎಲ್ಲ ಹೋರಾಟ ಸಂಘಟನೆಗಳು ಒಟ್ಟಾಗಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಸಭೆ ನಡೆಸಲಾಗುವುದು. ಗಣೇಶೋತ್ಸವ ಮುಗಿದ ಬಳಿಕ ಸಭೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಕರ್ನಾಟಕ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಹಲವು ನಾಯಕರು ಮಹದಾಯಿ ವಿಷಯದಲ್ಲೇ ಮುನ್ನೆಲೆಗೆ ಬಂದು ಈಗ ಹೋರಾಟಗಾರರನ್ನೇ ಮರೆತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕೇವಲ ಆರೋಪ-ಪ್ರತ್ಯಾರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ವರೆಗೂ ಯೋಜನೆ ಅನುಷ್ಠಾನಕ್ಕೆ ಮುಂದಾಗದಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡೂ ಪಕ್ಷಗಳ ನಾಯಕರನ್ನು ಒಂದೇ ವೇದಿಕೆಗೆ ಕರೆಸಿ ಯೋಜನೆಯ ಕುರಿತು ಅಂತಿಮ ನಿರ್ಧಾರ ಹೊರಡಿಸುವಂತೆ ಒತ್ತಾಯಿಸಲು ಬಹಿರಂಗ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಗಣೇಶೋತ್ಸವ ಆಚರಣೆ ಮುಗಿದ ಬಳಿಕ ಸಭೆ ಕರೆಯಲಾಗುವುದು. ಜನಪ್ರತಿನಿಧಿಗಳನ್ನು ಚರ್ಚೆಗೆ ಆಹ್ವಾನಿಸುವ ಸ್ಥಳ ಮತ್ತು ದಿನಾಂಕ ನಿಗದಿಪಡಿಸಲಾಗುವುದು. ಈ ಚರ್ಚೆ ಹುಬ್ಬಳ್ಳಿಯಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಂಸದ ಜಗದೀಶ ಶೆಟ್ಟರ್, ಯೋಜನಾ ವ್ಯಾಪ್ತಿಯ 14 ತಾಲೂಕುಗಳ ಶಾಸಕರನ್ನು ಚರ್ಚೆಗೆ ಆಹ್ವಾನಿಸಲಿದ್ದೇವೆ. ಯಾರು ಚರ್ಚೆಗೆ ಗೈರಾಗುತ್ತಾರೆಯೋ ಅವರ ಮನೆ ಮುಂದೆ ಅಥವಾ ಅವರು ಹುಬ್ಬಳ್ಳಿಗೆ ಬಂದಾಗ ಘೇರಾವ್ ಹಾಕಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಈ ವೇಳೆ ಸಮಿತಿಯ ಉಪಾಧ್ಯಕ್ಷ ಬಾಬಾಜಾನ ಮುಧೋಳ, ರೈತ ಸಂಘದ ಜಿಲ್ಲಾ ಅಧ್ಯಕ್ಷ ರವಿರಾಜ ಕಂಬಳಿ ಸೇರಿದಂತೆ ಹಲವರಿದ್ದರು.