ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಐತಿಹಾಸಿಕ ರಾಣಿ ಚನ್ನಮ್ಮಾಜಿಯ ವಿಜಯೋತ್ಸವ ಆಚರಣೆಗೆ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ಹಾಗೂ ಅಭಿಮಾನದಿಂದ ರಾಜ್ಯ ಸರ್ಕಾರದಿಂದ ₹ ೫ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.ಪಟ್ಟಣದ ಶೆಟ್ಟರ ಕಲ್ಯಾಣ ಮಂಟಪದಲ್ಲಿ ಕಿತ್ತೂರು ಉತ್ಸವದ ಆಚರಣೆಯ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೦ನೇ ವರ್ಷದ ವಿಜಯೋತ್ಸವ ಆಚರಿಸಲು ಯುವ ಅಧಿಕಾರಿಗಳ ತಂಡ ಉತ್ಸುಕವಾಗಿದೆ. ಅವರಿಗೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ವಿಜೃಂಭಣೆಯ ಉತ್ಸವ ಆಚರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಕೇಳಿ ಬಂದ ಸಲಹೆಗಳಲ್ಲಿ ಪ್ರತಿಶತ 95ರಷ್ಟು ಕಾರ್ಯಗಳನ್ನು ಅಧಿಕಾರಿಗಳು ಈಗಾಗಲೇ ಕಾರ್ಯಗತಗೊಳಿಸುತ್ತಿದ್ದಾರೆ. ಈ ಬಾರಿಯ ಉತ್ಸವ ಯಾವುದೇ ಲೋಪದೋಷವಿಲ್ಲದೆ ಅದ್ಧೂರಿಯಾಗಿ ಆಚರಣೆಗೆ ಸಿದ್ಧತೆಗಳು ನಡೆದಿವೆ ಎಂದು ಮಾಹಿತಿ ನೀಡಿದರು.ಉತ್ಸವಗಳ ಆಚರಣೆಗಳಲ್ಲಿ ಅಧಿಕಾರಿ ವರ್ಗಕ್ಕೆ ಚೌಕಟ್ಟಿನ ಮೀತಿ ಇರುತ್ತದೆ, ಕಾರಣ ಸಾರ್ವಜನಿಕರು ಸ್ವಪ್ರೇರಣೆಯಿಂದ ಮುಂದೆ ಬಂದು ಉತ್ಸವ ಯಶಸ್ಸಿಗೆ ಶ್ರಮಿಸಬೇಕೆಂದು ಸಲಹೆ ನೀಡಿದ ಅವರು, ಉತ್ಸವದ ಒಂದು ತಿಂಗಳ ಮುಂಚೆಯೇ ಪೂರ್ವಭಾವಿ ಸಭೆ ನಡೆದಿದೆ, ಎಲ್ಲ ಸಿದ್ಧತೆ ಕೈಗೊಳ್ಳಲು ಒಂದು ತಿಂಗಳ ಕಾಲಾವಕಾಶವಿದೆ. ಎಲ್ಲ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯಲಿದ್ದು, ಸರ್ಕಾರ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಪಟ್ಟಣದ ಅಭಿವೃದ್ಧಿಗಾಗಿ ಮತ್ತೆ ₹೬ ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶ್ವ ಮಟ್ಟದ ಕಾರ್ಯಕ್ರಮವಾಗಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ, ದೇಶದ ವಿವಿಧ ರಾಜ್ಯಗಳ ಆಹಾರ ಪದ್ಧತಿ ಪರಿಚಯಿಸುವ ನಿಟ್ಟಿನಲ್ಲಿ ಅನ್ನೋತ್ಸವ ಆಯೋಜಿಸಲಾಗುವುದು. ಉತ್ಸವದ ನೆನಪಿಗಾಗಿ ರಾಣಿ ಚನ್ನಮ್ಮನ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಹೆಸರನ್ನು ಕಿತ್ತೂರು ಕರ್ನಾಟಕ ಸಾರಿಗೆ ಸಂಸ್ಥೆ ಎಂದು ನಾಮಕರಣ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬದಲಾಗಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ಮರುನಾಮಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಬಾರಿ ಕಿತ್ತೂರು ಉತ್ಸವದ ಮೆರವಣಿಗೆಯಲ್ಲಿ ಕೇವಲ ನಂದಿ ಧ್ವಜಕ್ಕೆ ಅನುಮತಿಸಲಾಗುವುದು. ಅಕ್ಟೋಬರ್ 23 ರಿಂದ ಮೂರು ದಿನಗಳ ಕಾಲ ಜರುಗಲಿರುವ ಉತ್ಸವದಲ್ಲಿ ರಾಷ್ಟ್ರಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು ಎಂದರು.
ಏರ್ ಷೋ ಆಯೋಜನೆಗೆ ಕ್ರಮ:ಈ ಬಾರಿಯ ಕಿತ್ತೂರು ಉತ್ಸವ ನಿಮಿತ್ತ ಏರ್ ಷೋ ಆಯೋಜನೆಗಾಗಿ ಕೇಂದ್ರ ರಕ್ಷಣಾ ಸಚಿವಾಲಯ ಸಂಪರ್ಕಿಸಲಾಗಿದ್ದು, ನಡೆಯುವ ವಿಶ್ಚಾಸವಿದೆ ಎಂದಅವರು, ಉತ್ಸವದ ಅಂಗವಾಗಿ ಪಾರಂಪರಿಕ ಕ್ರೀಡೆಗಳ ಆಯೋಜನೆಗೆ ಪಟ್ಟಿ ತಯಾತಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಆಯೋಜನೆಗೆ ಚಿಂತಿಸಲಾಗುವುದು ಎಂದು ತಿಳಿಸಿದರು.
ಕಿತ್ತೂರಿನ ಕೋಟೆಯನ್ನು ನೋಡಿ ರೋಮಾಂಚನವಾಗಿದೆ. ಹೋರಾಟದ ಕುರಿತು ಮಾಹಿತಿ ಕೇಳಿ ಇನ್ನಷ್ಟು ಪುಳಕಿತಗೊಂಡೆ, ನನ್ನ ಸ್ಫೂರ್ತಿ ಮತ್ತಷ್ಟು ಇಮ್ಮಡಿಗೊಂಡಿದ್ದು, ವಿಜೃಂಭಣೆಯಿಂದ ಉತ್ಸವ ಆಚರಣೆಯಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಈಗಾಗಲೇ ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಹಾಗೂ ಈಗ ಶಾಸಕರು ಹಾಗೂ ನಿಮ್ಮ ಜೊತೆ ಸಭೆ ಮಾಡುತ್ತಿದ್ದೇನೆ, ಸಾರ್ವಜನಿಕರು ಸಲಹೆಗಳು ನನಗೆ ಅಮೂಲ್ಯವಾಗಿವೆ. ಈ ನಿಟ್ಟಿನಲ್ಲಿ ಸಭೆ ಮಾಡಿದ್ದೇವೆ. ಸಾರ್ವಜನಿಕರು ಸಲಹೆ ಜೊತೆಗೆ ಸಹಕಾರ ನೀಡಿದಲ್ಲಿ ಉತ್ಸವ ಯಶಸ್ವಿಯಾಗುವುದರಲ್ಲಿ ಅನುಮಾನ ಇಲ್ಲ. ಜಿಲ್ಲಾಡಳಿತದ ಎಲ್ಲ ಗಮನ ಈಗ ಕಿತ್ತೂರು ಉತ್ಸವದ ಮೇಲಿದೆ, ಈ ನಿಟ್ಟಿನಲ್ಲಿ ಉಪ ಸಮಿತಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ಮಾಡಬೇಕು ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಲ್ಮಠದ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾರ್ವಜನಿಕರ ಸಲಹೆ-ಸೂಚನೆಗಳು:ಕಿತ್ತೂರು ಉತ್ಸವದಲ್ಲಿ ಕವಿಗೋಷ್ಠಿ ಆಯೋಜನೆ ಜೊತೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಗೋಷ್ಠಿ ಆಯೋಜನೆ, 200ನೇ ವರ್ಷದ ವಿಜಯೋತ್ಸವ ಪ್ರಯುಕ್ತ 200 ಜನ ಸಾಧಕರನ್ನು ಗುರುತಿಸಿ ಸನ್ಮಾನ, ಮಲ್ಲಸರ್ಜ ಪುತ್ಥಳಿ ನಿರ್ಮಾಣ, ಕಿತ್ತೂರು ಆಳ್ವಿಕೆಗೆ ಸಂಬಂಧಿಸಿದ ಸ್ಮಾರಕಗಳ ಸಂರಕ್ಷಣೆ, ಉತ್ಸವದ ಮೆರವಣಿಗೆಯಲ್ಲಿ ಪೋಲಿಸ್ ಬ್ಯಾಂಡ್ ಹಾಗೂ ಮರಾಠ ಲೈಟ್ ಇನಫಂಟ್ರಿ ಬ್ಯಾಂಡ್ ತರುವ ಮೂಲಕ ಅದ್ಧೂರಿ ಉತ್ಸವ ಆಚರಣೆಗೆ ಸಾರ್ವಜನಿಕರಿಂದ ಹಲವು ಸಲಹೆಗಳು ಕೇಳಿಬಂದವು
ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರಶಿಕ್ಷಣಾರ್ಥಿ ಐ.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂಪಗಾವಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಕಿತ್ತೂರು ಉತ್ಸವದ ಉದ್ಘಾಟನೆಗೆ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಪಿ.ವಿ.ಸಿಂಧು, ಸೆನಾ ನೆಹ್ವಾಲ್ ಸೇರಿದಂತೆ ಇತರರನ್ನು ಸಂಪರ್ಕಿಸಲಾಗುತ್ತಿದ್ದು, ಅವರಿಂದ ಉತ್ಸವ ಉದ್ಘಾಟನೆಗೆ ಪ್ರಯತ್ನ ನಡೆದಿದೆ. ಚನ್ನಮ್ಮಾಜಿ, ರಾಯಣ್ಣನ ಹೆಸರಿನ ಮೇಲೆ ೨ ವೇದಿಕೆಗಳು ನಿರ್ಮಾಣಗೊಳ್ಳುತ್ತಿದ್ದು, ಈ ಎರಡೂ ವೇದಿಕೆಗಳಲ್ಲೂ ಒಳ್ಳೆಯ ಕಾರ್ಯಕ್ರಮ ಆಯೋಜಿಸಲಾಗುವುದು.- ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ