ಪ್ರಚೋದನಕಾರಿ ಹೇಳಿಕೆ ನೀಡುವುದೇ ಹಾಲಿ ಸಂಸದರ ಕಾಯಕ : ಜಯಪ್ರಕಾಶ್‌ ಹೆಗ್ಡೆ

| Published : Apr 21 2024, 02:20 AM IST

ಪ್ರಚೋದನಕಾರಿ ಹೇಳಿಕೆ ನೀಡುವುದೇ ಹಾಲಿ ಸಂಸದರ ಕಾಯಕ : ಜಯಪ್ರಕಾಶ್‌ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿವೃದ್ಧಿ ಮೊಟಕುಗೊಳಿಸಿ ಟೀಕಾಪ್ರಹಾರಕ್ಕೆ ಮಾತ್ರ ಹಾಲಿ ಸಂಸದರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ದ್ವೇಷಭರಿತ ಮಾತುಗಳನ್ನಾಡಿರುವ ಪರಿಣಾಮ ಕ್ಷೇತ್ರ ಹಲವಾರು ಸಮಸ್ಯೆಗಳಿಗೆ ಸಿಲುಕಿಕೊಂಡಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.

ಚಿಕ್ಕಮಗಳೂರು ತಾಲೂಕಿನ ಹರಿಹರದಹಳ್ಳಿ, ಮರ್ಲೆ, ಮುಗುಳುವಳ್ಳಿ ಗ್ರಾಮಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಭಿವೃದ್ಧಿ ಮೊಟಕುಗೊಳಿಸಿ ಟೀಕಾಪ್ರಹಾರಕ್ಕೆ ಮಾತ್ರ ಹಾಲಿ ಸಂಸದರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ದ್ವೇಷಭರಿತ ಮಾತುಗಳನ್ನಾಡಿರುವ ಪರಿಣಾಮ ಕ್ಷೇತ್ರ ಹಲವಾರು ಸಮಸ್ಯೆಗಳಿಗೆ ಸಿಲುಕಿಕೊಂಡಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.

ತಾಲೂಕಿನ ಹರಿಹರದಹಳ್ಳಿ, ಮರ್ಲೆ ಹಾಗೂ ಮುಗುಳುವಳ್ಳಿ ಗ್ರಾಮಗಳಲ್ಲಿ ಲೋಕಸಭಾ ಚುನಾವಣಾ ಸಂಬಂಧ ಅವರು ಶನಿವಾರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು, ಬೆಳೆಗಾರರಿಗೆ ಪರಿಹಾರ ಹಾಗೂ ಬಡಜನತೆಯ ಸಮಸ್ಯೆಗಳಿಗೆ ಸ್ಪಂದಿಸದೇ ಪ್ರಚೋದನಕಾರಿ ಹೇಳಿಕೆ ನೀಡುವುದೇ ಹಾಲಿ ಸಂಸದರ ಕಾಯಕವಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಕ್ಷೇತ್ರದಲ್ಲಿ ಇಲ್ಲಸಲ್ಲದ ಘಟನೆಗಳಿಗೆ ಉತ್ತರಿಸಲೆಂದೇ ಆಗಮಿಸುವ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುವರೇ ಎಂದು ಪ್ರಶ್ನಿಸಿದರು.

ದಶಕಗಳಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಈ ಭಾಗಕ್ಕೆ ಸಂಸದರ ನಿಧಿಯಿಂದ ಹಣ ಬಿಡುಗಡೆ ಗೊಳಿಸಿಲ್ಲ. ಚುನಾವಣೆ ಸಮೀಪಿಸುವ ವೇಳೆ ಮಾತ್ರ ನಾಯಕರ ಹೆಸರಿನಲ್ಲಿ ಮತಗಳಿಸುವ ಬಿಜೆಪಿ ಮುಖಂಡರು ಬಳಿಕ ಕೆಲಸ ಮಾಡಬೇಕೆನ್ನುವ ಸೋಮಾರಿತನದ ಮನಸ್ಥಿತಿ ಅವರಲ್ಲಿದೆ ಎಂದು ಟೀಕಿಸಿದರು.

ಕಳೆದ ತಮ್ಮ ಅಧಿಕಾರಾವಧಿಯಲ್ಲಿ ಚಿಕ್ಕಮಗಳೂರಿಗೆ ರೈಲ್ವೆ ಅಭಿವೃದ್ಧಿಗೊಳಿಸಿ ಪ್ರತಿನಿತ್ಯ ಒಂದು ರೈಲು ಸಂಚರಿಸ ಲಾಗುತ್ತಿತ್ತು. ಇಂದಿಗೂ ರೈಲು ಎರಡಾಗಲಿಲ್ಲ ಎಂದ ಆರೋಪಿಸಿದ ಅವರು, ದಿನೋಪಯೋಗಿ ವಸ್ತುಗಳ ಬೆಲೆ ಏರಿಸುವುದು, ರೈತರ ಜೀವನದ ಜೊತೆ ಚೆಲ್ಲಾಟವಾಡುವುದೇ ಬಿಜೆಪಿ ಧ್ಯೇಯವಾಗಿದೆ ಎಂದು ದೂರಿದರು.ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಅನುಷ್ಟಾನಗೊಳಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಜೀವಿಸಲು ಅವಕಾಶ ಮಾಡಿಕೊಟ್ಟಿದೆ. ಇವುಗಳನ್ನು ಬಿಟ್ಟಿ ಭಾಗ್ಯವೆಂದು ಟೀಕಿಸುವ ಬಿಜೆಪಿ ಮುಖಂಡರು ಕೇಂದ್ರದಿಂದ ರಾಜ್ಯಕ್ಕೆ ನೀಡಿರುವ ಶಾಶ್ವತ ಕೊಡುಗೆಗಳು ಏನೆಂದು ತಿಳಿಸಬೇಕು. ಕ್ಷೇತ್ರದ ಜನತೆಗೆ ಸುಳ್ಳು ಭರವಸೆ ನೀಡುವ ಪಕ್ಷಕ್ಕೆ ಅಧಿಕಾರ ನೀಡಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದರು.ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾ ಪೈಸೆ ಅನುದಾನ ನೀಡಿಲ್ಲ. ಭೀಕರ ಬರಗಾಲದಲ್ಲಿ ರೈತರು ಹಾಗೂ ಬೆಳೆಗಾರರಿಗೆ ಪರಿಹಾರ ಒದಗಿಸದೇ ಕಂಗಾಲಾಗಿಸಿರುವುದು ಬಿಜೆಪಿ, ಇವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ದೂರಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಪ್ರತಿನಿತ್ಯ 37 ಲಕ್ಷ ಮಂದಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ. ಇಂಥ ಜನೋಪಯೋಗಿ ಯೋಜನೆ ಜಾರಿಗೊಳಿಸುವ ಬದಲು ಕೇಂದ್ರ ಸರ್ಕಾರ ಸಾರ್ವಜನಿಕ ತೆರಿಗೆ ಹಣದಿಂದ ಉದ್ಯಮಿಗಳ ಸಾಲಮನ್ನಾ ಮಾಡುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಗ್ರಾಪಂ ಸದಸ್ಯ ಮುಳ್ಳೇಗೌಡ, ಮುಖಂಡರಾದ ಕೆ.ಎಸ್.ಶಾಂತೇಗೌಡ, ಕೆಂಚೇಗೌಡ, ಕುಮಾರ್, ಜಯಮ್ಮ ಕೆಂಚೇಗೌಡ, ವೇಣುಗೋಪಾಲ್, ಬಸವರಾಜ್, ಚಂದ್ರಪ್ಪ, ಲಕ್ಷ್ಮಣಗೌಡ, ಮರಿಯಪ್ಪ, ಲಲಿತಮ್ಮ, ರುದ್ರಯ್ಯ, ನಾಗರಾಜ್ ಹಾಜರಿದ್ದರು.

--ಬಾಕ್ಸ್--

ಬಿಜೆಪಿ ಶಾಶ್ವತ ಕಾಮಗಾರಿ ನಡೆಸಿಲ್ಲ: ನಯನಾ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಡಿ.ಸಿ.ಶ್ರೀಕಂಠಪ್ಪ, ಸದಾನಂದಗೌಡ ಹಾಗೂ ಶೋಭಾ ಕರಂದ್ಲಾಜೆ ಮೂವರು 28 ವರ್ಷಗಳಿಂದ ಅಧಿಕಾರ ನಡೆಸಿದರೂ ಶಾಶ್ವತ ಕಾಮಗಾರಿಗಳು ಕೈಗೊಂಡಿಲ್ಲ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.ಸರಳ ಸಜ್ಜನಿಕೆಯ ರಾಜಕಾರಣಿ ಜಯಪ್ರಕಾಶ್‌ ಹೆಗ್ಡೆ ಕ್ಷೇತ್ರದ ಜನರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಂಕಷ್ಟದ ಕ್ಷಣಗಳಲ್ಲಿ ಸ್ಪಂದಿಸುವ ಗುಣ ಅವರಲ್ಲಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಬದುಕು ಕೊಟ್ಟಿಕೊಡುವ ಮೂಲಕ ನ್ಯಾಯ ಸಮ್ಮತ ವಾಗಿ ಮತ ಕೇಳುತ್ತಿದೆಯೇ ಹೊರತು ಎಂದಿಗೂ ವಿಷಬೀಜ ಬಿತ್ತಿ ರಾಜಕೀಯ ಮಾಡುತ್ತಿಲ್ಲ ಎಂದರು.

20 ಕೆಸಿಕೆಎಂ 7ಚಿಕ್ಕಮಗಳೂರು ತಾಲೂಕಿನ ಹರಿಹರದಹಳ್ಳಿ, ಮರ್ಲೆ ಹಾಗೂ ಮುಗುಳುವಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಶನಿವಾರ ಚುನಾವಣಾ ಪ್ರಚಾರ ನಡೆಸಿದರು. ಶಾಸಕಿ ನಯನಾ ಮೋಟಮ್ಮ, ಗಾಯತ್ರಿ ಶಾಂತೇಗೌಡ ಹಾಗೂ ಕಾಂಗ್ರೆಸ್‌ ಮುಖಂಡರು ಇದ್ದರು.