ಸಾರಾಂಶ
ರೋಣ: ಇಲ್ಲಿಯ ಪುರಸಭೆ ಸಭಾಭವನದಲ್ಲಿ ಮಂಗಳವಾರ ಮುಖ್ಯಾಧಿಕಾರಿ ರಮೇಶ ಹೊಸಮನಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳ ಗುರಿ ಹೊಂದಿದ ಒಟ್ಟು ಆದಾಯ ₹ 14,52,69,595, ₹ 14,21,07,095 ಗಳ ಖರ್ಚು ಸೇರಿ ₹ 31,62,500 ಉಳಿತಾಯ ಬಜೆಟ್ ಮಂಡಿಸಲಾಯಿತು. ಬಜಟ್ ಮಂಡನೆ ಬಳಿಕ ಮಖ್ಯಾಧಿಕಾರಿ ಹಾಗೂ ಅಧ್ಯಕ್ಷರೊಂದಿಗೆ ಸದಸ್ಯರು ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ರೋಣ ಪಟ್ಟಣದಲ್ಲಿ ಕೆಲವು ಜನರು ಅನಧಿಕೃತವಾಗಿ ನಳ ಸಂಪರ್ಕ ಪಡೆದುಕೊಂಡಿದ್ದು, ಪುರಸಭೆಗೆ ಬರುವ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಅಂತಹ ಸಂಪರ್ಕಗಳನ್ನು ಸ್ಥಗಿತಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಅನಧಿಕೃತ ನಳಗಳಿಗೆ ನೀರು ಸರಬರಾಜು ನಿಲ್ಲಿಸಿದಾಗ ಮಾತ್ರ ಪುರಸಭೆಯ ನಿಯಮಗಳನ್ನು ಜನರು ಪಾಲಿಸುತ್ತಾರೆ. ಪುರಸಭೆಗೂ ಸಮಯಕ್ಕೆ ಸರಿಯಾಗಿ ಆದಾಯ ಬರುತ್ತದೆ ಎಂದು ಪುರಸಭೆ ಸದಸ್ಯ ಬಾವಾಸಾಬ ಬೆಟಗೇರಿ ಆಗ್ರಹಿಸಿದರು.ಸದಸ್ಯ ಗದಿಗೆಪ್ಪ ಕಿರೇಸೂರ ಮಾತನಾಡಿ, ಕರ ವಸೂಲಿ ಸರಿಯಾಗಿ ಆಗುತ್ತಿಲ್ಲ. ನಳದ ಬಿಲ್ ₹ 31 ಲಕ್ಷ ಬಾಕಿ ಇದೆ. ಕರ ವಸೂಲಿ ಸರಿಯಾಗಿ ಮಾಡಿದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸದಸ್ಯ ಸಂತೋಷ ಕಡಿವಾಳ ಮಾತನಾಡಿ, ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನಾಲ್ಕು ಸ್ವಾಗತ ಕಮಾನ್ ನಿರ್ಮಾಣ ಮಾಡಲು ಪ್ರತಿ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಾ ಬಂದಿದ್ದು, ಆದರೆ ಅದು ಇದುವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಕೇವಲ ಕಾಗದಗಳಿಗೆ ಮಾತ್ರ ಸೀಮಿತವಾಗಿದೆ. ಇದುವರೆಗೂ ಸ್ವಾಗತ ಕಮಾನ್ ನಿರ್ಮಾಣ ಮಾಡುವ ಮನಸ್ಸು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಆರೋಪಿಸಿದರು.ಕಳೆದ ಬಾರಿ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಬಂದಿದ್ದ ₹ 11 ಲಕ್ಷ ಅನುದಾನ ವಾಪಸ್ ಹೋಗಿದ್ದು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಇನ್ನಾದರೂ ಜನರಿಗೆ ಸರ್ಕಾರದಿಂದ ಬರುವ ಯೋಜನೆಗಳು ಸಮರ್ಪಕವಾಗಿ ತಲುಪುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದರು.
ಬಜೆಟ್ ತಯಾರಿಸುವ ಮೊದಲು ಮುಖ್ಯಾಧಿಕಾರಿಗಳು ಸದಸ್ಯರೊಂದಿಗೆ ಚರ್ಚಿಸಿಲ್ಲ. ಅಧಿಕಾರಿಗಳು ಬಜೆಟ್ ಕುರಿತು ಚರ್ಚಿಸದೇ ಹಿಂದಿನ ವರ್ಷದ ಬಜೆಟ್‌ನ ಪ್ರತಿಯನ್ನೇ ಯಥಾವತ್ತಾಗಿ ತಯಾರಿಸಿದಂತೆ ಕಾಣುತ್ತಿದೆ. ಹೀಗಾದಲ್ಲಿ ರೋಣದಲ್ಲಿ ಅಭಿವೃದ್ಧಿ ಮರೀಚಿಕೆಯಾಗುವುದು. ಹೊಸ ಯೋಜನೆಗಳು, ವಿಶೇಷ ಅಭಿವೃದ್ಧಿಗಳ ಕೈಗೊಳ್ಳಬಹುದು. ಆದರೆ ಸದಸ್ಯರಿಗೆ ಸಭೆಯಲ್ಲಿ ದಿಢೀರ್ ವಿಷಯ ಪ್ರಸ್ತಾಪಿಸಿದರೇ ಚರ್ಚಿಸುವುದು ಹೇಗೆ? ಈ ರೀತಿ ಮಾಡುವುದು ಸಮಂಜಸವಲ್ಲ ಎಂದು ಸದಸ್ಯ ಮಲ್ಲಯ್ಯ ಮಹಾಪುರುಷಮಠ ಪ್ರಶ್ನಿಸಿದರು. ಸಾರ್ವಜನಿಕ ಮೂತ್ರಾಲಯ, ಮಹಿಳಾ ಶೌಚಾಲಯ, ನಾಮಫಲಕ ಅಳವಡಿಸುವುದು, ನಾಲ್ಕು ದಿಕ್ಕಿನಲ್ಲಿ ಸ್ವಾಗತ ಕಮಾನ್ ಅಳವಡಿಸಬೇಕು. ಬೀದಿ ದೀಪ ಅಳವಡಿಸುವಂತೆ, ಸಮರ್ಪಕ ಚರಂಡಿ ನಿರ್ಮಿಸುವಂತೆ ಆಗ್ರಹಿಸಿದರು.ಸಭೆಯಲ್ಲಿ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಸದಸ್ಯ ಮಿಥುನ್ ಜಿ. ಪಾಟೀಲ, ಗದಿಗೆಪ್ಪ ಕಿರೇಸೂರ, ದಾವಕಸಾಬ ಬಾಡಿನ, ಈಶ್ವರ ಕಡಬುನಕಟ್ಟಿ, ಸಂಗಪ್ಪ ಜಿಡ್ಡಿಬಾಗಿಲ, ವಿಜಯಲಕ್ಷ್ಮೀ ಕೊಟಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.