ರಾಮಚಂದ್ರಾಪುರ ಮಠದ ನಾಲ್ಕು ಮಹೋನ್ನತ ಪ್ರಶಸ್ತಿಗಳ ಪ್ರದಾನ

| Published : Oct 12 2023, 12:00 AM IST

ರಾಮಚಂದ್ರಾಪುರ ಮಠದ ನಾಲ್ಕು ಮಹೋನ್ನತ ಪ್ರಶಸ್ತಿಗಳ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಚಂದ್ರಾಪುರ ಮಠದ ನಾಲ್ಕು ಮಹೋನ್ನತ ಪ್ರಶಸ್ತಿಗಳ ಪ್ರದಾನ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ನಡೆಯಿತು. ಸಿಎಂಆರ್ ವಿವಿ ಮಾಜಿ ಕುಲಪತಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ ಪ್ರೊ. ಎಂ.ಎಸ್. ಶಿವಕುಮಾರ ಅವರಿಗೆ ಪುರುಷೋತ್ತಮ ಪ್ರಶಸ್ತಿಯನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರದಾನ ಮಾಡಿದರು.

ಗೋಕರ್ಣ:

ಶ್ರೀರಾಮಚಂದ್ರಾಪುರ ಮಠದ ನಾಲ್ಕು ಮಹೋನ್ನತ ಪ್ರಶಸ್ತಿಗಳ ಪ್ರದಾನ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ನಡೆಯಿತು. ಸಿಎಂಆರ್ ವಿವಿ ಮಾಜಿ ಕುಲಪತಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ ಪ್ರೊ. ಎಂ.ಎಸ್. ಶಿವಕುಮಾರ ಅವರಿಗೆ ಪುರುಷೋತ್ತಮ ಪ್ರಶಸ್ತಿಯನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರದಾನ ಮಾಡಿದರು.

ಅಂತೆಯೇ ಸಾಗರದ ಲಕ್ಷ್ಮಮ್ಮ ಬಂಗಲಗಲ್ಲು ಅವರಿಗೆ ಶ್ರೀಮಾತಾ ಪ್ರಶಸ್ತಿ ಮತ್ತು ಕುಮಟಾದ ಮಂಜುನಾಥ ಕೃಷ್ಣ ಹೆಗಡೆ ಕೂಜಳ್ಳಿ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬರುವೆ ರಾಮಕೃಷ್ಣಯ್ಯ ಸುಬ್ರಹ್ಮಣ್ಯ ಅವರಿಗೆ ಮರಣೋತ್ತರವಾಗಿ ಕರುಣಿಸಿದ ಧನ್ಯಸೇವಕ ಪ್ರಶಸ್ತಿಯನ್ನು ಪತ್ನಿ ಹಾಗೂ ಪುತ್ರ ಸ್ವೀಕರಿಸಿದವರು.

ಈ ಮೊದಲು ಶ್ರೀಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಮಾಜಿ ಸಚಿವೆ ಸುಮಾ ವಸಂತ್, ಹಿರಿಯ ರಾಜಕಾರಣಿ ಬಿ.ಎಲ್. ಶಂಕರ್ ಅವರಂಥ ಗಣ್ಯರಿಗೂ ಪುರುಷೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಶ್ರೀಮಠದ ಆರಾಧ್ಯ ದೈವ ಮರ್ಯಾದಾ ಪುರುಷೋತ್ತಮ (ರಾಮ) ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಶ್ರೀರಾಮನ ಆದರ್ಶಗಳ ಪರಿಪಾಲನೆ ಮಾಡುವ, ಸಮಾಜಕ್ಕೆ ಅತ್ಯಮೋಘ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಮಡಿಕೇರಿ ಮೂಲದ ಶಿವಕುಮಾರ, ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು (ಈಗಿನ ಎನ್ಐಟಿಕೆ) ಯಿಂದ ಬಿಇ ಪದವಿ ಪಡೆದು ಇಪಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದವರು. ನಂತರ ಸಿಎಂಆರ್ ವಿವಿ ಕುಲಪತಿಗಳಾಗಿ, ವಿಟಿಯು ಕುಲಸಚಿವರಾಗಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾ ಪರಿಷತ್ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅತ್ಯುತ್ತಮ ಎಂಜಿನಿಯರಿಂಗ್ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಇವರನ್ನು ರಾಜ್ಯದ ತಾಂತ್ರಿಕ ಶಿಕ್ಷಣಕ್ಕೆ ನೀಡಿದ ಕೊಡುಗೆ ಪರಿಗಣಿಸಿ ರಾಜ್ಯ ಸರ್ಕಾರದ ವತಿಯಿಂದ ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಶಸ್ತಿ ನೀಡಿ ಗೌರವಿಸಿದ್ದರು. ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ನಿ ವಿಶಾಲಾಕ್ಷಿ ಶಿವಕುಮಾರ್ ಉಪಸ್ಥಿತರಿದ್ದರು.

ಸನಾತನೀಯ ಆದರ್ಶ ಸ್ತ್ರೀಸಂಕುಲಕ್ಕೆ ರತ್ನಸದೃಶವಾದ, ನಡೆ- ನುಡಿಗಳಿಂದ ಸರ್ವಮಾನ್ಯಳಾದ ಸೀತಾಮಾತೆಯ ಹೆಸರಿನಲ್ಲಿ ನೀಡುವ ಶ್ರೀಮಾತಾ ಪ್ರಶಸ್ತಿಯನ್ನು ಲಕ್ಷ್ಮಮ್ಮ ಬಂಗಲಗಲ್ಲು ಅವರಿಗೆ ಶ್ರೀಗಳು ಪ್ರದಾನ ಮಾಡಿದರು. ಇಳಿವಯಸ್ಸಿನಲ್ಲೂ ಸಕ್ರಿಯವಾಗಿರುವ ಇವರು ಸಾಗರದ ಬಳಿಯ ಸಂಪದವರು. ಕುಟುಂಬದ ಏಳಿಗೆಯ ಜತೆಜತೆಗೆ ಸಮಾಜದ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಾ ಬಂದವರು. ಗೋವುಗಳಿಗೆ ಉಪಚಾರ, ಮನುಷ್ಯರಿಗೆ ಮನೆ ಮದ್ದು, ಬಾಣಂತನ ಲೇಹ ಮಾಡುವುದು ಇವರಿಗೆ ಕರಗತವಾಗಿ ಬಂದ ಸಿದ್ಧಿ. ರಾಮಾಯಣ, ಮಹಾಭಾರತ, ಭಾಗವತದಂಥ ಪುರಾಣ ಗ್ರಂಥಗಳನ್ನು ಭಜನೆ ರೂಪದಲ್ಲಿ ಕಂಠಸ್ಥ ಮಾಡಿಕೊಂಡು ಇಂದಿಗೂ ಸರಾಗವಾಗಿ ಹಾಡುತ್ತಾ ಜನಸಾಮಾನ್ಯರಲ್ಲಿ ಭಕ್ತಿಯ ಬೀಜವನ್ನು ಬಿತ್ತುತ್ತಿದ್ದಾರೆ.ಆಂಜನೇಯನ ಹೆಸರಿನಲ್ಲಿ ಸೇವೆಗೇ ಜೀವನ ಮುಡಿಪಾಗಿಟ್ಟವರಿಗೆ ನೀಡುವ ಶ್ರೀಮಠದ ದಿವ್ಯ ಪ್ರಶಸ್ತಿ ಧನ್ಯಸೇವಕ ಪ್ರಶಸ್ತಿಯನ್ನು ಬರುವೆ ರಾಮಕೃಷ್ಣಯ್ಯ ಸುಬ್ರಹ್ಮಣ್ಯ ಅವರ ಪರವಾಗಿ ಪತ್ನಿ ಹಾಗೂ ಪುತ್ರ ಸ್ವೀಕರಿಸಿದವರು. ಗ್ರಾಮವಿಕಾಸ ಕೇಂದ್ರದ ಅಧ್ಯಕ್ಷರಾಗಿ, ಊರ ಅಭಿವೃದ್ಧಿಗೆ ಹಲವು ಸಮಾಜಮುಖಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದವರು. ತುಮರಿ ಗ್ರಾಪಂ ಅಧ್ಯಕ್ಷರಾಗಿ, ಪ್ರಗತಿಪರ ರೈತರಾಗಿಯೂ ಹೆಸರು ಮಾಡಿದವರು. ಸೇವೆಯಲ್ಲೇ ಧನ್ಯತೆ ಪಡೆದ ಇವರಿಗೆ ಮರಣೋತ್ತರವಾಗಿ ಪ್ರಶಸ್ತಿ ಅನುಗ್ರಹಿಸಲಾಯಿತು.

ಕಾರ್ಯದಕ್ಷತೆ, ನಿರಪೇಕ್ಷತೆ, ಕರ್ತವ್ಯನಿಷ್ಠೆಯಿಂದ ಶ್ರೀಮಠಕ್ಕೆ, ಸಮಾಜಕ್ಕೆ ಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ಚಾತುರ್ಮಾಸ್ಯ ಪ್ರಶಸ್ತಿಯನ್ನು ಮಂಜುನಾಥ ಕೃಷ್ಣ ಹೆಗಡೆ ಕೂಜಳ್ಳಿ ಸ್ವೀಕರಿಸಿದರು. ಸಂಘಟನಾ ಚಾತುರ್ಮಾಸ್ಯದ ಕೊನೆಯ ದಿನ ಈ ಪ್ರಶಸ್ತಿ ಘೋಷಿಸಲಾಗಿತ್ತು. ವೃತ್ತಿಯಲ್ಲಿ ತೆರಿಗೆ ಸಲಹೆಗಾರರಾಗಿರುವ ಇವರು ಚಂದಾವರ-ಮಿರ್ಜಾನ ವಲಯ ಅಧ್ಯಕ್ಷರಾಗಿ, ಕೆಕ್ಕಾರು ಮಠ ಅಧ್ಯಕ್ಷ, ಗೋಕರ್ಣದಲ್ಲಿ ಗುರುಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಎರಡು ಬಾರಿ ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷರಾಗಿ, ಉತ್ತರ ಕನ್ನಡ ಪ್ರಾಂತ್ಯ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.

ಇದೇ ವೇ:ಎ ಶಿವಕುಮಾರ ಅವರಿಗೆ ದಾನ-ಮಾನ ಗೌರವವನ್ನೂ ಅನುಗ್ರಹಿಸಲಾಯಿತು. ವೇದ ತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ನಿಕಟಪೂರ್ವ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ವಿವಿವಿ ಸಮಿತಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಆಡಳಿತಾಧಿಕಾರಿ ಡಾ. ಟಿ.ಜಿ. ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.