ಗದಗ ಬೆಟಗೇರಿ ನಗರಸಭೆಯಲ್ಲಿ ಉಳಿತಾಯ ಬಜೆಟ್‌ ಮಂಡನೆ

| Published : Feb 29 2024, 02:02 AM IST

ಸಾರಾಂಶ

ವಾರ್ಡಗಳಲ್ಲಿ ಸದಸ್ಯರು ಕುಳಿತಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಪೌರಾಯುಕ್ತರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಯಾವುದೇ ಸಣ್ಣ ಸಣ್ಣ ಕೆಲಸಗಳೂ ಆಗುತ್ತಿಲ್ಲ. ಮೊದಲು ಎಲ್ಲ 35 ವಾರ್ಡಗಳಿಗೂ ತಲಾ ₹ 5 ಲಕ್ಷ ಕುಡಿವ ನೀರಿನ ವ್ಯವಸ್ಥೆಗಳಾದ ಬೋರ್ ವೆಲ್ ದುರಸ್ಥಿ ಸೇರಿದಂತೆ ವಿವಿಧ ಕೆಲಸಗಳಿಗೆ ನೀಡಬೇಕು, ಇದಕ್ಕೆ ಪೌರಾಯುಕ್ತರು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಬೇಕು

ಗದಗ: ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರು ಸದಸ್ಯರ ಮನವಿ, ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ, ಗದ್ಧಲದ ಮಧ್ಯೆಯೇ ಬುಧವಾರ ನಗರಸಭೆ ಅಧ್ಯಕ್ಷೆ ಉಷಾ ದಾಸರ ₹ 3.04 ಕೋಟಿ ಉಳಿತಾಯ ಬಜೆಟ್‌ ಮಂಡನೆ ಮಾಡಿದರು.

ಆರಂಭಿಕ ಶಿಲ್ಕು ₹46.25 ಕೋಟಿ, ಅಂದಾಜು ಆದಾಯ ₹ 156.19 ಕೋಟಿ, ಒಟ್ಟು ಜಮಾ ₹ 198.44 ಕೋಟಿ, ಅಂದಾಜು ವೆಚ್ಚ ₹ 195.40 ಕೋಟಿ ಸೇರಿ ₹ 3.04 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದು ಇದು ವಿರೋಧ ಪಕ್ಷದವರ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು.

ಬಜೆಟ್ ವಿವರ: ಅಂದಾಜು ಆದಾಯದಲ್ಲಿ ವೇತನ ಅನುದಾನ ₹ 12.61 ಕೋಟಿ, ವಿದ್ಯುತ್ ಅನುದಾನ ₹ 21.72 ಕೋಟಿ, ಆಸ್ತಿ ತೆರಿಗೆ ಆದಾಯ ₹ 13 ಕೋಟಿ, ಅಭಿವೃದ್ಧಿ ಹಣ ₹ 2.50 ಕೋಟಿ, ಆಸ್ತಿ ತೆರಿಗೆ ಮೇಲಿನ ದಂಡ ₹ 2 ಕೋಟಿ, ನೀರು ಸರಬರಾಜು ಮೂಲಗಳ ಆದಾಯ ₹ 3 ಕೋಟಿ, ಅಸಾಧಾರಣ ಸ್ವೀಕೃತಿಗಳಾದ ಸರ್ವರಿಗೂ ಸೂರು, ಗೃಹಭಾಗ್ಯ, ಲಿಡ್ಕರ್ ಯೋಜನೆಗಳು ಹಾಗೂ ಇತರೆ ಸೇರಿ ₹ 54.62 ಕೋಟಿ ಸೇರಿ ಒಟ್ಟು ₹ 152.19 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಅಂದಾಜು ವೆಚ್ಚದಲ್ಲಿ ನೌಕರರ ವೇತನಕ್ಕಾಗಿ ₹12.61 ಕೋಟಿ, ವಿದ್ಯುತ್ ಬಿಲ್ ₹ 21.72 ಕೋಟಿ, ನಗರಸಭೆಯಿಂದ ವಂತಿಗೆಗಳು ₹ 8.79 ಕೋಟಿ, ಅಮೃತ ಯೋಜನೆ ₹ 2.50 ಕೋಟಿ, ಸ್ವಚ್ಛ ಭಾರತ ಮಿಶನ್ ₹ 5.26 ಕೋಟಿ, ರಸ್ತೆ, ಗಟಾರ, ಫುಟ್ ಪಾತ್ರಗಳ ದುರಸ್ತಿ ₹ 1.27 ಕೋಟಿ, ಹೊರಗುತ್ತಿಗೆ ಕಾರ್ಯಾಚರಣೆ, ಘನತ್ಯಾಜ್ಯ ವಸ್ತು ನಿರ್ವಹಣೆ ₹ 5.10 ಕೋಟಿ, ಬೀದಿ ದೀಪ ನಿರ್ವಹಣೆಗಾಗಿ ₹ 1.50 ಕೋಟಿ, ಬಂಡವಾಳ ಪಾವತಿಗಳಾದ ಕಟ್ಟಡಗಳು ಮತ್ತು ಇತರೆ ನಿರ್ಮಾಣ ₹ 3.03 ಕೋಟಿ, ಇತರೆ ಸ್ಥಿರಾಸ್ತಿಗಳು ₹ 4.38 ಕೋಟಿ, ರಸ್ತೆ, ಫುಟ್ ಪಾತ್ ನಿರ್ಮಾಣ ಹಾಗೂ ಪಾರ್ಕಿಂಗ್ ಗೆ ₹ 19.90 ಕೋಟಿ, ಚರಂಡಿ ನಿರ್ಮಾಣ ₹ 4 ಕೋಟಿ, ನೀರು ಸರಬರಾಜು ವ್ಯವಸ್ಥೆಗಾಗಿ ₹ 14.65 ಕೋಟಿ ಸೇರಿ ₹ 130.87 ಕೋಟಿ ಹಾಗೂ ಅಸಾಧಾರಣ ಪಾವತಿಗೆ ₹ 64.53 ಕೋಟಿ ಸೇರಿ ಒಟ್ಟಾರೆ 195.40 ಕೋಟಿ ಅಂದಾಜು ವೆಚ್ಚ ಹಾಗೂ ಪಾವತಿಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷರ ಖರ್ಚು ವೆಚ್ಚದ ಲೆಕ್ಕ ನೀಡಿದರು. ನಂತರ ಬಜೆಟ್ ಮೇಲೆ ಚರ್ಚೆಗಳು ನಡೆದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ, ಬಜೆಟ್ ಗೆ ಅನುಮೋದನೆ ನೀಡಲಾಯಿತು.

ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಆರೋಪ: ಬಜೆಟ್ ಸಭೆ ಆರಂಭವಾಗುತ್ತಿದಂತೆ ಆಡಳಿತ ಪಕ್ಷದ ಸದಸ್ಯ ಚಂದ್ರು ತಡಸದ ಮಾತನಾಡಿ, ಅವಳಿ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಯಾಗುತ್ತಿದೆ, ವಾರ್ಡಗಳಲ್ಲಿ ಸದಸ್ಯರು ಕುಳಿತಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಪೌರಾಯುಕ್ತರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಯಾವುದೇ ಸಣ್ಣ ಸಣ್ಣ ಕೆಲಸಗಳೂ ಆಗುತ್ತಿಲ್ಲ. ಮೊದಲು ಎಲ್ಲ 35 ವಾರ್ಡಗಳಿಗೂ ತಲಾ ₹ 5 ಲಕ್ಷ ಕುಡಿವ ನೀರಿನ ವ್ಯವಸ್ಥೆಗಳಾದ ಬೋರ್ ವೆಲ್ ದುರಸ್ಥಿ ಸೇರಿದಂತೆ ವಿವಿಧ ಕೆಲಸಗಳಿಗೆ ನೀಡಬೇಕು, ಇದಕ್ಕೆ ಪೌರಾಯುಕ್ತರು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲ 35 ಜನ ಸದಸ್ಯರು ಒಕ್ಕೊಲರನಿಂದ ಆಗ್ರಹಿಸಿದರು. ಇದಕ್ಕೆ ಅಧ್ಯಕ್ಷರು ಕೂಡಾ ಸಹಮತ ವ್ಯಕ್ತ ಪಡಿಸಿದರು. ಸಭೆಯಲ್ಲಿ ಪೌರಾಯುಕ್ತರು ಹೇಳಿಕೆ ನೀಡಬೇಕು ಎಂದಾಗಲು ಪೌರಾಯುಕ್ತ ಮಾರುತಿ ಬ್ಯಾಕೋಡ್ ಮಾತನಾಡದೇ ಇದ್ದಾಗ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ದಯವಿಟ್ಟು ಕೆಲಸ ಮಾಡು ಮನಸ್ಸಿದ್ದರೆ ಮಾಡ್ರಿ ಇಲ್ಲಾಂದ್ರ ಬೇರೆ ಕಡೆ ಹೋಗ್ರಿ.. ನೀರಿಗಾಗಿ ಜನ್ರೆಲ್ಲಾ ನಮ್ಗ ಬೈಯ್ಯಾಕತ್ತಾರ, ನಮ್ಮ ಮನಿಗೆ ಬರುವರನ್ ನಿಮ್ಮ ಮನಿಗೆ ಕಳಸತೀವಿ ನೋಡ್ರಿ ಎಂದ ನಂತರ ಪೌರಾಯುಕ್ತರು ಮಾತನಾಡಿದರು.