ಕ್ಲಿಷ್ಟಕರವಾದ ವೈದ್ಯಕೀಯ ವಿಷಯಗಳ ಬಗ್ಗೆ ಸರಳ ಬರವಣಿಗೆ

| Published : Oct 21 2024, 12:42 AM IST

ಸಾರಾಂಶ

ದ್ವಿಗರ್ಭಾಶಯ ಕೇವಲ ಶೇ.0.3 ಪ್ರತಿಶತ ಮಹಿಳೆಯರಲ್ಲಿ ಕಂಡುಬರುವ ಜನ್ಮಜಾತ ವೈಕಲ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ಕ್ಲಿಷ್ಟಕರವಾದ ವೈದ್ಯಕೀಯ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅತ್ಯಂತ ಸರಳವಾಗಿ ಡಾ.ಅರಕಲಗೂಡು ನೀಲಕಂಠಮೂರ್ತಿ ಬರೆದಿದ್ದಾರೆ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ. ಪ್ರಸನ್ನಕುಮಾರ್‌ ಬಣ್ಣಿಸಿದರು.

ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್‌ ಟ್ರಸ್ಟ್ ಮತ್ತು ವೈದ್ಯ ವಾರ್ತಾ ಪ್ರಕಾಶನವು ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅರಕಲಗೂಡು ನೀಲಕಂಠಮೂರ್ತಿ ಅವರ ''''ಸಮಯದ ನೀರು ಮತ್ತೆ ಹರಿಯುವ ಹೊತ್ತು'''', ''''ಹೆಣ್ಣೊಬ್ಬಳು ಗರ್ಭಕೋಶಗಳೆರಡು'''', ''''ಮುಖದಿಂದೆದ್ದು ಎತ್ತಲೋ ನಡೆದ ಕಣ್ಣು'''' ಕೃತಿಗಳನ್ನು ಕುರಿತು ಮಾತನಾಡಿದರು.

ದ್ವಿಗರ್ಭಾಶಯ ಕೇವಲ ಶೇ.0.3 ಪ್ರತಿಶತ ಮಹಿಳೆಯರಲ್ಲಿ ಕಂಡುಬರುವ ಜನ್ಮಜಾತ ವೈಕಲ್ಯ. ಇದರ ಲಕ್ಷಣ ಮತ್ತು ಕಾರಣಗಳನ್ನು, ರೋಗ ಪರೀಕ್ಷೆ ಮತ್ತು ಚಿಕಿತ್ಸಾ ವಿಧಾನಗಳನ್ನು ಅತ್ಯಂತ ಕುತೂಹಲಕಾರಿಯಾಗಿಯೂ ಬರೆದಿದ್ದಾರೆ. ಇದು ವೈದ್ಯರ ಹಾಗೂ ಓದಿದವರ ಜ್ಞಾನವನ್ನು ಕೂಡ ಹೆಚ್ಚಿಸುತ್ತದೆ ಎಂದರು.

ಇದಲ್ಲದೇ ಕೊಬ್ಬಿನ ಕಥೆ, ಅತಿಕ್ರಿಯಾಶೀಲ ಮೂತ್ರಕೋಶ, ಬೆಲ್ಸ್‌ ಪಾಲ್ಸಿ, ಬೆವರು, ಗುದರೋಗಗಳು, ಮೂತ್ರಪಿಂಡದ ಕಲ್ಲುಗಳು, ಅತಿನಿದ್ರಾರೋಗ, ನಿದ್ರಾಭಂಗ ಶ್ವಾಸಸ್ತಂಭನ, ಸಿಕಲ್‌ಸೆಲ್‌ ಅನೀಮಿಯ ಕುರಿತು ಕೂಡ ಅರ್ಥವೂರ್ಣವಾಗಿ ಬರೆದಿದ್ದಾರೆ ಎಂದು ಅವರು ಶ್ಲಾಘಿಸಿದರು.

ಬಹುತೇಕ ರೋಗಳಿಗೆ ನಾವು ತಿನ್ನುವ ಆಹಾರ ಕೂಡ ಅದರಲ್ಲೂ ಜಂಕ್‌ಫುಡ್‌ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಆಹಾರ ಸೇವನೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

ಎಪ್ಪತ್ತರ ದಶಕದಲ್ಲಿ ಸತತ 13 ವರ್ಷಗಳ ಕಾಲ ಸೋಮಲಿಯಾ ದೇಶದಲ್ಲಿ ಸೇವೆ ಸಲ್ಲಿಸಿದ್ದ ಡಾ.ನೀಲಕಂಠಮೂರ್ತಿ ಅವರು `ಕಗ್ಗತ್ತಲ ಖಂಡದಲ್ಲಿ'''' ಎಂಬ ಕೃತಿಯಲ್ಲಿ ಅಲ್ಲಿನ ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇದಾದ ನಂತರ ಈಗ ಎರಡು ಕವನ ಸಂಕಲನಗಳನ್ನು ರಚಿಸಿದ್ದು, ಅವುಗಳು ಕೂಡ ಉತ್ತಮ ವಸ್ತಗಳನ್ನು ಹೊಂದಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಸಾಹಿತ್ಯ ಬರವಣಿಗೆ ಕಷ್ಟಕರ. ಪ್ರತಿ ವಾಕ್ಯ, ಪ್ರತಿ ಪದವನ್ನು ಯೋಚಿಸಿ, ಮರುಪರಿಶೀಲಿಸಿ, ತಿದ್ದಿ ಬರೆಯಬೇಕಾಗುತ್ತದೆ ಎಂದರು.

ಮನುಷ್ಯನ ದೇಹರಚನೆ ನಿಗೂಢ ಪ್ರಕ್ರಿಯೆ. ಅದರಲ್ಲೂ ಮಹಿಳೆಯರು ದೇಹರಚನೆ ಸಂಕೀರ್ಣವಾಗಿರುತ್ತದೆ. ಮಹಿಳೆ ಮಗುವಿಗೆ ಜನ್ಮ ನೀಡಬೇಕಾಗುತ್ತದೆ. ಹೀಗಿರುವಾಗ ಅಪರೂಪದ ಎರಡು ಗರ್ಭಕೋಶಗಳಿರುವ ಪ್ರಕರಣದ ಬಗ್ಗೆ ಬರೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ವ್ಯಾಪಾರೀಕರಣವಾಗಿದೆ. ಹೀಗಿರುವಾಗ ಇನ್ನೂ ಕೂಡ ಅಲ್ಲಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ವೈದ್ಯರು ಸೇವೆ ಮಾಡುತ್ತಿದ್ದಾರೆ ಎಂದರು.

ಮನುಷ್ಯನಿಗೆ ಗಾಳಿ ಮತ್ತು ನೀರು ತುಂಬಾ ಮುಖ್ಯ. ಆದ್ದರಿಂದ ನೀರಿನ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಸಾಹಿತ್ಯ ರಚನೆಯಲ್ಲಿ ಬೇರೆ ಬೇರೆ ಕ್ಷೇತ್ರಗಳವರು ತೊಡಗಿಸಿಕೊಂಡಾಗ ಮಾತ್ರ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯಾಗುತ್ತದೆ. ವೈದ್ಯರಾದವರು ಕೂಡ ಕನ್ನಡ ಸಾರಸ್ವತ ಲೋಕಕ್ಕೆಅಪರೂಪದ ಕೃತಿಗಳನ್ನು ನೀಡುತ್ತಿದ್ದಾರೆ ಎಂದರು.

ವೈದ್ಯವಾರ್ತಾ ಪ್ರಕಾಶನದ ನಿರ್ದೇಶಕ ಎಚ್‌ಎಂಟಿ ಲಿಂಗರಾಜೇ ಅರಸು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಡಾ.ಎಂಜಿಆರ್‌ ಅರಸು ಕಾರ್ಯಕ್ರಮ ನಿರೂಪಿಸಿದರು. ಎಂ. ನಟರಾಜ್‌ ಪ್ರಾರ್ಥಿಸಿದರು. ಡಾ.ಕೆ.ಎಸ್. ಉಮಾಶಂಕರ್‌ ಸ್ವಾಗತಿಸಿದರು. ನಟರಾಜ್‌ ವಂದಿಸಿದರು.