ಮಲ್ಲತ್ತಹಳ್ಳಿಯಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2024 ಹಾಗೂ 2025 ನೇ ಸಾಲಿನ ಗೌರವ ಪ್ರಶಸ್ತಿ, 2024 ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೆಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲಾಕೃತಿಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು. ಆದ್ದರಿಂದ ಕಲಾಕೃತಿಗಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಕರೆ ನೀಡಿದರು.ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಗುರುವಾರ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ 2024 ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ, 2024 ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ಸರ್ಕಾರ ಕಲಾವಿದರನ್ನು ಗೌರವಿಸುತ್ತಿದೆ:
ಕಲೆಗೆ ಧ್ಯಾನಸ್ಥ ಮನಸ್ಥಿತಿ ಬೇಕು. ಅದಕ್ಕಾಗಿಯೇ ಅವರನ್ನು ಕಲಾ ತಪಸ್ವಿಗಳು ಎನ್ನುತ್ತೇವೆ. ಇಂತಹ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾದ್ದು ಎಲ್ಲರ ಜವಾಬ್ದಾರಿ. ಕನ್ನಡದ ಎಲ್ಲ ರಾಜ ಪರಂಪರೆಯೂ ಕಲಾವಿದರಿಗೆ ಗೌರವ ನೀಡಿದೆ. ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಸರ್ಕಾರ ಕಲಾವಿದರನ್ನು ಗೌರವಿಸುತ್ತಿದೆ ಎಂದು ಬಣ್ಣಿಸಿದರು.ಆಡಳಿತಾಧಿಕಾರಿ ಕಿರಣ್ ಸಿಂಗ್ ಮಾತನಾಡಿ, ಕರ್ನಾಟಕ ಶಿಲ್ಪಕಲೆಗಳ ತವರೂರು. ಮಹಾನ್ ಶಿಲ್ಪಿಗಳು ಇಲ್ಲಿದ್ದು, ಈಗ ಅವರ ಸಂಖ್ಯೆ ಕಡಿಮೆಯಾಗುತ್ತಾ ಇದೆ. ಶಿಲ್ಪಿಗಳು ತಮ್ಮ ಕಲೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಮಕ್ಕಳಿಗೆ ಶಿಲ್ಪಕಲೆ ಕಲಿಸಬೇಕು. ಶಿಲ್ಪಕಲೆಗಳ ಮನೆತನಗಳು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಕಲಾ ವಿಮರ್ಶಕ ಕೆ.ವಿ.ಸುಬ್ರಮಣ್ಯಂ ಮಾತನಾಡಿ, ಹಿಂದಿನ ಕಾಲದಲ್ಲಿ ರಾಜರು ಕಲಾ ಪೋಷಕರಾಗಿದ್ದರು. ರಾಜರು ಕರೆ ನೀಡಿದರೆ ಕಲಾವಿದರು ರಣರಂಗಕ್ಕೂ ತೆರಳುತ್ತಿದ್ದರು. ಊಟಕ್ಕೆ, ಬಟ್ಟೆಗೆ ಎಲ್ಲಿ ತೊಂದರೆ ಇರಲಿಲ್ಲವೋ ಅಂತಹ ಭಾಗದಲ್ಲಿ ಕಲೆ ಬೆಳೆದಿದೆ. ಪ್ರತಿ ಶಿಲ್ಪಿಗೂ ಪರಂಪರೆಯ ಅರಿವು, ಐತಿಹಾಸಿಕ ಪ್ರಜ್ಞೆ ಇರಬೇಕು. ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತಿತರ ಸ್ಥಳಗಳಲ್ಲಿ ಅದ್ಭುತವಾದ ಕಲಾಕೃತಿಗಳಿವೆ ಎಂದು ಬಣ್ಣಿಸಿದರು.ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ಮಾತನಾಡಿ, ಅಕಾಡೆಮಿ ಸ್ಥಾಪನೆಯಾಗಿ 3 ದಶಕಗಳು ಕಳೆದಿದ್ದು ಸಾಕಷ್ಟು ಬದಲಾವಣೆಗಳಾಗಿವೆ. ಇದೇ ಮೊದಲ ಬಾರಿಗೆ ಅಕಾಡೆಮಿಯಿಂದ ಡಿಜಿಟಲ್ ಆರ್ಟ್ ಪರಿಚಯ ಮಾಡುವ ಸನ್ನಿವೇಶ ಸೃಷ್ಟಿಯಾಗಿದ್ದು ಇದನ್ನೂ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿದ್ದೇವೆ. ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಕಲಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ.ಸಿಂಗ್, ಮಲ್ಲೇಶ್ವರ ಅರೇನಾ ಅನಿಮೇಷನ್ನ ನಿರ್ದೇಶಕಿ ಸುಕನ್ಯಾ ಶ್ರೀನಿವಾಸ್, ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.31 ಕಲಾವಿದರಿಗೆ ಪ್ರಶಸ್ತಿ ಪ್ರದಾನ
ತಲಾ 50,000 ರು. ಬಹುಮಾನದೊಂದಿಗೆ ಮೈಸೂರಿನ ಕೆ.ರಾಘವೇಂದ್ರ, ಉತ್ತರ ಕನ್ನಡದ ಅರುಣ ಬಿಕ್ಕು ಗುಡಿಗಾರ ಸೇರಿ 10 ಕಲಾವಿದರಿಗೆ ಶಿಲ್ಪಶ್ರೀ ಗೌರವ ಪ್ರಶಸ್ತಿ, ತಲಾ 25 ಸಾವಿರ ರು. ಬಹುಮಾನದೊಂದಿಗೆ ತುಮಕೂರಿನ ಸಿ.ಪಿ.ವಿಶ್ವನಾಥ್, ಧಾರವಾಡದ ನವೀನ್ ಶಂ.ಕಡ್ಲಾಸ್ಕರ್ ಸೇರಿ 10 ಕಲಾವಿದರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಲಾ 25 ಸಾವಿರ ರು. ಬಹುಮಾನದೊಂದಿಗೆ 11 ಕಲಾವಿದರಿಗೆ 19ನೆಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಪ್ರಶಸ್ತಿ ನೀಡಿ ಗೌರವಿಸಲಾಯಿತು.