ಮೀಸಲಾತಿಗಾಗಿ ಸಂವಿಧಾನದ ಸಂರಕ್ಷಣೆ ಅಗತ್ಯ: ಎಲ್‌.ಸಂದೇಶ್‌

| Published : Apr 03 2024, 01:37 AM IST

ಸಾರಾಂಶ

ದಲಿತರಿಗೆ ಮಾತ್ರವೇ ಮೀಸಲಾತಿ ಸವಲತ್ತಿದೆ ಎಂಬ ಭಾವನೆ ಹೋಗಬೇಕು. ಸಂವಿಧಾನ ವಿರೋಧಿಶಕ್ತಿಗಳ ವಿರುದ್ಧದ ರಾಜಕೀಯ ಹೋರಾಟದಲ್ಲಿ ಹಿಂದುಳಿದವರು ಮುಖ್ಯ ಪಾತ್ರ ವಹಿಸಬೇಕು. ರಾಜ್ಯ ಮತ್ತು ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳು ಒಗ್ಗೂಡಬೇಕು. ರಾಜಕೀಯ ಸೂಕ್ಷತೆಗಳನ್ನು ಗ್ರಹಿಸಿ ಚುನಾವಣಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಂವಿಧಾನ ಬದಲಾಯಿಸುವ ದುಷ್ಟಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ದೊರೆಯುತ್ತಿರುವ ‘ಮೀಸಲಾತಿ’ ಮುಂದುವರಿಯಬೇಕಾದರೆ ಸಂವಿಧಾನದ ಸಂರಕ್ಷಣೆ ಅಗತ್ಯ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಪ್ರತಿಪಾದಿಸಿದರು.

ನಗರದ ಗಾಂಧಿಭವನದಲ್ಲಿ ಮಂಗಳವಾರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಆಯೋಜಿಸಿದ್ದ ಹಿಂದುಳಿದವರ ರಾಜಕೀಯ ಸಮಾಲೋಚನೆ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದಲಿತರಿಗೆ ಮಾತ್ರವೇ ಮೀಸಲಾತಿ ಸವಲತ್ತಿದೆ ಎಂಬ ಭಾವನೆ ಹೋಗಬೇಕು. ಸಂವಿಧಾನ ವಿರೋಧಿಶಕ್ತಿಗಳ ವಿರುದ್ಧದ ರಾಜಕೀಯ ಹೋರಾಟದಲ್ಲಿ ಹಿಂದುಳಿದವರು ಮುಖ್ಯ ಪಾತ್ರ ವಹಿಸಬೇಕು ಎಂದರು.

ರಾಜ್ಯ ಮತ್ತು ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳು ಒಗ್ಗೂಡಬೇಕು. ರಾಜಕೀಯ ಸೂಕ್ಷತೆಗಳನ್ನು ಗ್ರಹಿಸಿ ಚುನಾವಣಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಂವಿಧಾನ ಬದಲಾಯಿಸುವ ದುಷ್ಟಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು ಎಂದರು.

ರಾಜ್ಯದಲ್ಲಿ ೨.೨೦ ಕೋಟಿ ಜನಸಂಖ್ಯೆ ಇದ್ದರೂ ಹಿಂದುಳಿದವರನ್ನು ಪ್ರತಿನಿಧಿಸುವ ಒಬ್ಬರು ಸಂಸದರಿಲ್ಲ. ಇದು ನಮ್ಮ ರಾಜಕೀಯ ಹಿನ್ನಡೆಯನ್ನು ತೋರುತ್ತದೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿಯನ್ನು ಲೋಕಸಭೆ-ವಿಧಾನಸಭೆಗೂ ವಿಸ್ತರಿಸಬೇಕು. ರಾಷ್ಟ್ರೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುಳಿದವರ ಮೀಸಲಾತಿ ಘೋಷಿಸಬೇಕು ಎಂದರು.

ಜಾತಿವಾರು ಸಂಘಟನೆ ಮತ್ತು ನಾಯಕತ್ವಕ್ಕೆ ನೀಡಿದಷ್ಟೇ ಆದ್ಯತೆಯನ್ನು ವರ್ಗಗಳ ಬಲವರ್ಧನೆಗೂ ನೀಡಬೇಕು. ಹಿಂದುಳಿದವರು ಹಿಂಜರಿಕೆ ಬಿಟ್ಟು ಚುನಾವಣಾ ನಾಯಕತ್ವ ವಹಿಸಿಕೊಳ್ಳಬೇಕು ಎಂದ ಅವರು, ಮಂಡ್ಯ ಜಿಲ್ಲೆಯಲ್ಲಿ ಐದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹಿಂದುಳಿದ ಸಮಾಜಗಳ ಒಮ್ಮತದ ತೀರ್ಮಾನ ಯಾರನ್ನು ಬೇಕಾದರೂ ಗೆಲ್ಲಸಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಂಬಾರ ಜಾಗೃತ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ವಿಶ್ವಕರ್ಮ ಸೇವಾ ಟ್ರಸ್ಟ್‌ನ ಎಚ್.ವಿ.ಸತೀಶ್, ಮಳವಳ್ಳಿ ಪ್ರಕಾಶ್, ಸವಿತಾ ಸಮಾಜದ ಪ್ರತಾಪ್, ಎಂ.ಎನ್.ರಾಜಣ್ಣ, ಗಾಣಿಗ ಸಂಘದ ಪುಟ್ಟಸ್ವಾಮಿ, ಮಡಿವಾಳ ಸಮಾಜದ ಡಿ.ರಮೇಶ್, ಸಿ.ಸಿದ್ದಶೆಟ್ಟಿ, ದೊಂಬಿದಾಸ ಕ್ಷೇಮಾಭಿವೃದ್ಧಿ ಸಂಘದ ಶಂಕರಯ್ಯ, ಗೋವಿಂದಸ್ವಾಮಿ, ಗಂಗಾಮತ, ದೇವರಾಜ ಕನ್ನಲಿ, ಸಂತೆಕಸಲಗೆರೆ ಬಸವರಾಜು, ಗಂಜಾರಾಮು ರಜಪೂತ್ ಸಮಾಜದ ಪ್ರಕಾಶ್‌ಸಿಂಗ್, ಭಾವಸಾರ ಕ್ಷತ್ರಿಯ ಸಮಾಜದ ಶೇಷಗಿರಿರಾವ್ ಮಾತನಾಡಿದರು.

ಮುಖಂಡರಾದ ವೈ.ಸಿ.ಪ್ರದೀಪ್, ಬೆಟ್ಟರಾಜು, ಆನಂದ್, ಕಾಂತರಾಜ್, ಸುಂಡಳ್ಳಿ ಬಸವರಾಜ್, ಪರಮೇಶ್, ಚುಂಚಪ್ಪ ದಾಸಪ್ಪ, ಗಿರಿಯಪ್ಪ, ಅಹಿಂದ ನಿಂಗಪ್ಪ, ಮದ್ದೂರು ಶಶಿಕುಮಾರ್ ಇತರರು ಉಪಸ್ಥಿತರಿದ್ದರು.