ಕಲಾವಿದರ ಬದುಕಿಗೆ ಆಸರೆಯಾಗುವ ಹಾಗೂ ಅವರ ಪ್ರತಿಭೆ ಮತ್ತು ಸೃಜನಶೀಲತೆಗೆ ಉತ್ತೇಜನ ನೀಡುವ ಬಹುಪಯೋಗಿ ಯೋಜನೆಗಳು ರೂಪುಗೊಳ್ಳಬೇಕು ಎಂದು ಮೇಯರ್ ಪಿ.ಗಾದೆಪ್ಪ ತಿಳಿಸಿದರು.

ಬಳ್ಳಾರಿ: ಕಲಾವಿದರ ಬದುಕಿಗೆ ಆಸರೆಯಾಗುವ ಹಾಗೂ ಅವರ ಪ್ರತಿಭೆ ಮತ್ತು ಸೃಜನಶೀಲತೆಗೆ ಉತ್ತೇಜನ ನೀಡುವ ಬಹುಪಯೋಗಿ ಯೋಜನೆಗಳು ರೂಪುಗೊಳ್ಳಬೇಕು ಎಂದು ಮೇಯರ್ ಪಿ.ಗಾದೆಪ್ಪ ತಿಳಿಸಿದರು.

ನಗರದ ಶ್ರೀ ಮಾತೃ ಮಹಿಳಾ ಮಂಡಳಿ (ರಿ), ಮಿನಿಸ್ಟರ್ ಆಫ್ ಕಲ್ಚರ್ ಸಹಯೋಗದೊಂದಿಗೆ ಕಲ್ಚರಲ್ ಫಂಕ್ಷನ್ ಪ್ರೊಡಕ್ಷನ್ ಗ್ರಾಂಟ್ ಸ್ಕೀಮ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಸದ್ಗುರು ಮಹರ್ಷಿ ಜಯದೇವ್ ಉಪನ್ಯಾಸ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ನಶಿಸುತ್ತಿರುವ ಸಾಂಪ್ರದಾಯಿಕ ಕಲೆಗಳ ಸಂರಕ್ಷಣೆಯ ಜತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಅಗತ್ಯ. ಅರ್ಹ ಕಲಾವಿದರನ್ನು ಗುರುತಿಸಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಾರದರ್ಶಕವಾಗಿ ಯೋಜನೆಗಳ ಪ್ರಯೋಜನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷರಾದ ಕೆ. ಪುಷ್ಪ ಚಂದ್ರಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಮೇಧ ಕಾಲೇಜು ಪ್ರಾಂಶುಪಾಲ ರಾಮ್ ಕಿರಣ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಹಾಗೂ ಸಂಸ್ಕಾರ ಭಾರತಿ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿದರು.ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಮುದ್ದಟನೂರು ಎಚ್. ತಿಪ್ಪೇಸ್ವಾಮಿ, ತೊಗಲುಗೊಂಬೆ ಕಲಾವಿದ ಸುಬ್ಬಣ್ಣ, ನೃತ್ಯ ನಿರ್ದೇಶಕ ಕೆ.ಸಿ. ಸುಂಕಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶರಣಬಸವ ಅವರು ವಚನ ಗಾಯನ, ಕೆ.ಸಿ. ಸುಂಕಣ್ಣ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಿ. ತುಳಸಿ ಮತ್ತು ತಂಡದಿಂದ ತೊಗಲುಗೊಂಬೆ ಪ್ರದರ್ಶನ ಜರುಗಿದವು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಗಣ್ಯರು ಪ್ರಮಾಣಪತ್ರಗಳನ್ನು ವಿತರಿಸಿದರು. ಹನಗಾ ಹಾಗೂ ಪ್ರಜ್ಞಾ ಕಾರ್ಯಕ್ರಮ ನಿರ್ವಹಿಸಿದರು.