ಕೆರೆಗಳು ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕರೂ ಕೆರೆಗಳ ಸಂರಕ್ಷಣೆಗೆ ಕೈಜೋಡಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ನೀರಿನ ಬವಣೆ ತಪ್ಪಿಸಲು ಸಾಧ್ಯ ಎಂದು ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಹೇಳಿದರು.
ಬ್ಯಾಡಗಿ: ಕೆರೆಗಳು ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕರೂ ಕೆರೆಗಳ ಸಂರಕ್ಷಣೆಗೆ ಕೈಜೋಡಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ನೀರಿನ ಬವಣೆ ತಪ್ಪಿಸಲು ಸಾಧ್ಯ ಎಂದು ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಹೇಳಿದರು.
ಸೋಮವಾರ ಶಿಡೆನೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಬ್ಯಾಡಗಿ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ, ಶಿಡೇನೂರ ಇವರ ಸಂಯುಕ್ತ ಆಶ್ರಯದಲ್ಲಿ ''''''''ನಮ್ಮೂರು ನಮ್ಮ ಕೆರೆ'''''''' ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾದ ದೊಡ್ಡ ತಳವಾರ ಕಟ್ಟೆ ಕೆರೆಯ ಹಸ್ತಾಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೆರೆಗಳು ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಗ್ರಾಮಸ್ಥರು ನಿರಂತರವಾಗಿ ಮುಂದಾಗಬೇಕು ಎಂದರು.ಎಲ್ಲರ ಸಹಕಾರ ಅಗತ್ಯ:ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯ ಗಳಷ್ಟೇ ನೀರಿನ ಸಂಪನ್ಮೂಲಗಳ ಸಂರಕ್ಷಣೆಯೂ ಅಗತ್ಯವಾಗಿದೆ. ಹಿಂದಿನ ಕಾಲದಲ್ಲಿ ಗ್ರಾಮಗಳ ಕೆರೆಗಳು ಜನರ ಬದುಕಿನ ಅವಿಭಾಜ್ಯ ಭಾಗವಾಗಿದ್ದವು. ಆದರೆ ನಿರ್ಲಕ್ಷ್ಯದಿಂದಾಗಿ ಹಲವು ಕೆರೆಗಳು ಹೂಳು ತುಂಬಿಕೊಂಡು ನೀರು ಸಂಗ್ರಹಿಸುವ ಸಾಮರ್ಥ್ಯ ಕಳೆದುಕೊಂಡಿವೆ. ಇಂತಹ ಕೆರೆಗಳನ್ನು ಹಂತ ಹಂತವಾಗಿ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿ: ಮಾಜಿ ಶಾಸಕ ನೇಹರು ಒಲೇಕಾರ ಮಾತನಾಡಿ, ''''''''ನಮ್ಮೂರು ನಮ್ಮ ಕೆರೆ'''''''' ಯಂತಹ ಕಾರ್ಯ ಕ್ರಮಗಳು ಜನರಲ್ಲಿ ಜಲಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಮಸ್ಥರನ್ನು ಅಭಿವೃದ್ಧಿ ಕಾರ್ಯಗಳಲ್ಲಿ ನೇರವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ. ಪುನಶ್ಚೇತನಗೊಂಡ ಕೆರೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಕೆರೆಗೆ ಹಾನಿಯಾಗದಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.ಕೆರೆಗಳ ಅಭಿವೃದ್ಧಿ ಅವಶ್ಯ:ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಕೆರೆ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದಲ್ಲಿ ಹರಿದುಹೋಗುವ ನೀರನ್ನು ಸಂಗ್ರಹಿಸಿ, ಬೇಸಿಗೆಯಲ್ಲಿ ಜನರು ಹಾಗೂ ರೈತರಿಗೆ ನೆರವಾಗುವಂತೆ ಕೆರೆಗಳನ್ನು ಉಳಿಸಿಕೊಳ್ಳಬೇಕು. ಕೆರೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ನಂತರ ಅದರ ನಿರ್ವಹಣೆ ಹಾಗೂ ಸಂರಕ್ಷಣೆಯ ಜವಾಬ್ದಾರಿಯನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ನಿರ್ವಹಿಸಬೇಕು ಎಂದು ಹೇಳಿದರು.
ಅಂತರ್ಜಲ ಮಟ್ಟ ಹೆಚ್ಚಳ: ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಕೆರೆಗಳ ಹೂಳೆತ್ತುವುದು, ಜಲಾನಯನ ಪ್ರದೇಶವನ್ನು ಸಂರಕ್ಷಿಸುವುದು, ಕೆರೆಗೆ ತ್ಯಾಜ್ಯ ಸೇರುವುದನ್ನು ತಡೆಯುವುದು ಹಾಗೂ ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ಒಂದು ಕೆರೆಯ ಪುನಶ್ಚೇತನವು ಕೇವಲ ನೀರು ಸಂಗ್ರಹಿಸುವ ಕಾರ್ಯವಲ್ಲ; ಅದು ಕೃಷಿ, ಜಾನುವಾರು, ಪರಿ ಸರ ಹಾಗೂ ಗ್ರಾಮೀಣ ಜನಜೀವನಕ್ಕೆ ಹೊಸ ಚೈತನ್ಯ ನೀಡುವ ಕಾರ್ಯವಾಗಿದೆ ಎಂದು ಹೇಳಿದರು.ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಲಾಶೀಲ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಗಂಗಣ್ಣ ಯಲಿ, ಈರನಗೌಡ ತೆವರಿ, ಕಿರಣ ಕುಮಾರ ಗಡಿಗೋಳ ಮಹದೇವ ನಾಯಕ, ನಾಗನಗೌಡ ತೆವರಿ, ಮಲ್ಲಿಕಾರ್ಜುನ ದುರ್ಗದ, ಚನಬಸಪ್ಪ ಹುಲ್ಲತ್ತಿ, ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮಸ್ಥರು, ರೈತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.