ತುಳುನಾಡಿನ ಇತಿಹಾಸ, ಪುರಾತತ್ವ ಹಾಗೂ ಸಾಂಸ್ಕೃತಿಕ ಪರಂಪರೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಎರಡು ದಶಕಗಳಿಂದ ಮಹತ್ವದ ಸೇವೆ ಸಲ್ಲಿಸುತ್ತಿರುವ ಪ್ರೊ. ಟಿ. ಮುರುಗೇಶಿ ಅವರಿಗೆ ತುಳುವರ್ಲ್ಡ್ ಫೌಂಡೇಶನ್ ವತಿಯಿಂದ ಇಲ್ಲಿನ ಪಡುಬಿದ್ರಿಯ ನಿನ್ನಿಕಲ್ಲು ಪಾದೆಯಲ್ಲಿ ಗೌರವ ಸಲ್ಲಿಸಲಾಯಿತು.

ಕಾಪು : ತುಳುನಾಡಿನ ಇತಿಹಾಸ, ಪುರಾತತ್ವ ಹಾಗೂ ಸಾಂಸ್ಕೃತಿಕ ಪರಂಪರೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಎರಡು ದಶಕಗಳಿಂದ ಮಹತ್ವದ ಸೇವೆ ಸಲ್ಲಿಸುತ್ತಿರುವ ಪ್ರೊ. ಟಿ. ಮುರುಗೇಶಿ ಅವರಿಗೆ ತುಳುವರ್ಲ್ಡ್ ಫೌಂಡೇಶನ್ ವತಿಯಿಂದ ಇಲ್ಲಿನ ಪಡುಬಿದ್ರಿಯ ನಿನ್ನಿಕಲ್ಲು ಪಾದೆಯಲ್ಲಿ ಗೌರವ ಸಲ್ಲಿಸಲಾಯಿತು.ಕರ್ನಾಟಕ ಇತಿಹಾಸ ಅಕಾಡೆಮಿಯ 2026ನೇ ಸಾಲಿನ ಪ್ರತಿಷ್ಠಿತ ಡಾ. ಶ್ರೀನಿವಾಸ ಹವಾನೂರು ಪ್ರಶಸ್ತಿಗೆ ಭಾಜನರಾಗಿರುವ ಪ್ರೊ. ಟಿ. ಮುರುಗೇಶಿ ಅವರು, ತುಳುನಾಡಿನ ಪ್ರಾಚೀನ ಇತಿಹಾಸ, ಪುರಾತತ್ವ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ದಾಖಲೀಕರಣ ಮತ್ತು ಸಂರಕ್ಷಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ನಿನ್ನಿಕಲ್ಲು ಪಾದೆಯಂತಹ ಐತಿಹಾಸಿಕ ಹಾಗೂ ಪರಂಪರಿಕ ಸ್ಥಳಗಳ ಮಹತ್ವವನ್ನು ಗುರುತಿಸಿ, ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆಧಿಮ ಕಲೆ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿಯಾಗಿರುವ ಪ್ರೊ. ಮುರುಗೇಶಿ ಅವರು ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಈ ಸಂದರ್ಭದಲ್ಲಿ ತುಳುವ ಮಹಾಸಭೆ ಆಸ್ಟ್ರೇಲಿಯಾದ ಸಂಚಾಲಕ ಸಚಿನ್ ಶೆಟ್ಟಿ ತಗ್ಗುಂಜೆ, ತುಳುವರ್ಲ್ಡ್ ಫೌಂಡೇಶನ್‌ನ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ನಿವೃತ್ತ ಪತ್ರಕರ್ತ ಸುರೇಶ್ ಕರ್ಕೇರ, ತುಳುವೇಶ್ವರ ದೇವಸ್ಥಾನದ ಸಂಚಾಲಕ ಅರವಿಂದ ಬೆಲ್ಚಡ, ನಿನ್ನಿಕಲ್ಲು ಪಾದೆಯ ಸಂಚಾಲಕ ವಿಜಿತ್ ಶೆಟ್ಟಿ ಉಪಸ್ಥಿತರಿದ್ದರು.