ಶಿರಸಿ: ಪ್ರತಿಯೊಬ್ಬ ರೈತರು ಹಿತಮಿತವಾದ ರೀತಿಯಲ್ಲಿ ರಾಸಾಯನಿಕ ಗೊಬ್ಬರ ಬಳಸುವ ಮೂಲಕ ಕೃಷಿ ಭೂಮಿಯನ್ನು ಸಂರಕ್ಷಿಸಲು ಸಾಧ್ಯವಿದೆ. ಫಲವತ್ತಾದ ಕೃಷಿ ಭೂಮಿ ಸಂರಕ್ಷಿಸಿ, ಸುಸ್ಥಿರ ಉತ್ಪಾದನೆಯೊಂದಿಗೆ ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆ ಮಾಡಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ್ ನಾಯ್ಕ ರೈತರಿಗೆ ಕರೆ ನೀಡಿದರು.
ನಗರದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರ, ಉತ್ತರ ಕನ್ನಡ, ಶಿರಸಿ ಇವರ ಸಹಯೋಗದಲ್ಲಿ “ಖೇತ್ ಬಚಾವೋ ಅಭಿಯಾನ” ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.ಈ ಅಭಿಯಾನದಡಿ ರಸಗೊಬ್ಬರಗಳ ಸಮತೋಲಿತ ಹಾಗೂ ವಿವೇಚನಾಯುಕ್ತ ಬಳಕೆ, ಮಣ್ಣಿನ ಆರೋಗ್ಯ ಸುಧಾರಣೆ, ಜಲ ಸಂರಕ್ಷಣೆ, ಮಳೆ ನೀರು ಕೊಯ್ಲಿಗೆ ಪ್ರೋತ್ಸಾಹ, ಸುಸ್ಥಿರ ಪೋಷಕಾಂಶ ನಿರ್ವಹಣಾ ಪದ್ಧತಿಗಳ ಅಳವಡಿಕೆ ಮತ್ತು ನೈಸರ್ಗಿಕ ಕೃಷಿಯ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ತೋಟಗಾರಿಕೆ ವಿಜ್ಞಾನಿ ಡಾ. ಹರೀಶ್ ಡಿ.ಕೆ. ಮಾತನಾಡಿ ಪ್ರಸ್ತುತ ಅಡಿಕೆ ಕೃಷಿಯಲ್ಲಿ ಕಂಡು ಬರುತ್ತಿರುವ ಎಲೆ ಚುಕ್ಕೆ ರೋಗ, ಬೇರು ಹುಳುವಿನ ಬಾಧೆ, ಸಿಂಗಾರ ಕೊಳೆ ರೋಗ ಹಾಗೂ ಮಿಳ್ಳೆ ಉದುರುವ ಸಮಸ್ಯೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.ಡಾ. ಅಮಿತ್ ಪೂಜಾರ ಅವರು ಮಾತನಾಡಿ ಜೀವಾಮೃತ, ಘನಜೀವಾಮೃತ ಹಾಗೂ ಮಣ್ಣಿಗೆ ಹೊದಿಕೆ ಹಾಕುವ ಪದ್ಧತಿಗಳ ಮೂಲಕ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಸಂರಕ್ಷಿಸಿ, ಮಣ್ಣಿನ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಕೃಷಿಯನ್ನು ಸುಸ್ಥಿರಗೊಳಿಸಬಹುದು ಎಂದು ನೈಸರ್ಗಿಕ ಕೃಷಿಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ರಂಗನಾಥ ಜಿ.ಜೆ., ಡಾ. ಶ್ವೇತಾಕುಮಾರಿ ಯು. ಕೃಷಿ ಇಲಾಖೆ ಹಾಗೂಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಮತ್ತು ರೈತರು ಮತ್ತು ರೈ ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 38 ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಕೃಷಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.