ಸಾರಾಂಶ
ಕನ್ನಡಪ್ರಭ ವಾರ್ತೆ ಸಾವಳಗಿ
ನಾವು ಹುಟ್ಟಿ ಬೆಳೆದ ನಾಡಿನಲ್ಲಿ ಜನಪದ ಕಲೆ, ಸಂಸ್ಕೃತಿ, ಸಾಹಿತ್ಯ ಜೀವಂತವಾಗಿದ್ದು, ಅದನ್ನು ಗುರುತಿಸಿ, ಅದರ ಬಗ್ಗೆ ಮತ್ತಷ್ಟು ತಿಳಿದುಕೊಂಡು, ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಪ್ರಭಾರಿ ಪ್ರಾಂಶುಪಾಲ ವಸಂತ ಪಿ.ಎಸ್. ಹೇಳಿದರು.ಇಲ್ಲಿನ ಚೆನ್ನಪ್ಪಣ್ಣ ನಿಂಗಪ್ಪಣ್ಣ ನಿರಾಣಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ಸಾಂಸ್ಕೃತಿಕ ಘಟಕದಿಂದ ಶುಕ್ರವಾರ ನಡೆದ ಜಾನಪದ ಉತ್ಸವ ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಧಾನ್ಯಗಳ ರಾಶಿಗೆ ಸಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಒಂದೆಡೆ ಇಳಕಲ್ ಸೀರೆ, ಗುಳೇದಗುಡ್ಡದ ಕುಪ್ಪಸ ತೊಟ್ಟು, ಮೂಗುತಿ ಧರಸಿ, ತುರುಬಿಗೆ ಹೂ ಮುಡಿದುಕೊಂಡ ವಿದ್ಯಾರ್ಥಿನಿಯರು, ಮತ್ತೊಂದೆಡೆ ಬಿಳಿ ಶರ್ಟ್, ಧೋತಿಯುಟ್ಟ ಹುಡುಗರು. ಇಂತಹ ಅಪರೂಪ ಕ್ಷಣಕ್ಕೆ ಶುಕ್ರವಾರ ಸಾವಳಗಿ ಸಾಕ್ಷಿಯಾಯಿತು.ಮುಖ್ಯ ಅತಿಥಿಯಾಗಿಯಾಗಿ ಆಗಮಿಸಿದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಮಂಜುಳಾ ಸಂಬಾಳಮಠ, ಉಳ್ಳವರು ಶಿವಾಲಯ ಮಾಡುವರಯ್ಯಾ ಎಂದು ವಿಘ್ನನಿವಾರಕನನ್ನು ನೆನೆದು ಶಾಸ್ತ್ರೀಯ ಸಂಗೀತ, ಜಾನಪದ ಗಾಯನ ಪ್ರಸ್ತುತಪಡಿಸಿದರು. ಮಲ್ಲಯ್ಯಾ ಸಂಬಾಳಮಠ ಭಾವಗೀತೆ ಹಾಡಿದರು. ಹುನ್ನೂರ ಗ್ರಾಮದ ಮಲ್ಲಿಕಾರ್ಜುನ ನಾವ್ಹಿ ತಬಲಾ, ಬನಹಟ್ಟಿ ಗ್ರಾಮದ ಶ್ರೀಶೈಲ ಹಲ್ಯಾಳ ಕೀ ಬೋರ್ಡ್ ನುಡಿಸಿದರು. ಐಕ್ಯೂಎಸಿ ಸಂಚಾಲಕಿ ಶಶಿಕಲಾ ಸಿ, ಪೂರ್ಣಿಮಾ ಸಿ., ಮಲ್ಲಿಕಾರ್ಜುನ ಜಮಖಂಡಿ, ಸಂತೋಷ ಕೈರಾವರ, ಅನಿತಾ ಸನ್ನಕ್ಕಿ, ಸಬಿಹಾ ಮಿಚೋಣಿ, ತಬಸುಮ ವಿಜಾಪೂರ, ಸಿಬ್ಬಂದಿ ಇದ್ದರು.
ಹಳ್ಳಿಯ ಸೊಗಡು ನಾವರಣ:ಎತ್ತಿನ ಬಂಡಿಯೊಂದಿಗೆ ಸಾಲು ಸಾಲಾಗಿ ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ, ಕಲ್ಯಾಣ ಕಟ್ಟಿ ಮಾರ್ಗವಾಗಿ ಹಳೇ ಬಸ್ ನಿಲ್ದಾಣ ಮೂಲಕ ಬ್ಯಾಂಜೋ, ಡೊಳ್ಳು, ತಾಳ ಬಾರಿಸುತ್ತ ಜಾನಪದ ಸೊಗಡಿನ ನೃತ್ಯ ಪ್ರದರ್ಶನದೊಂದಿಗೆ ಕಾಲೇಜು ಆವರಣದಕ್ಕೆ ಆಗಮಿಸಿದರು. ಕುಂಭಹೊತ್ತ ವಿದ್ಯಾರ್ಥಿಯರು, ಉಪನ್ಯಾಸಕರು ಸಹ ಹಳ್ಳಿಯ ವೇಷಭೂಷಣದಲ್ಲಿ ಮಿಂಚಿದರು.