ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿರುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ- ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆಧುನಿಕತೆ ಹೆಸರಿನಲ್ಲಿ ನಾವು ನಮ್ಮತನ ಮರೆಯುತ್ತಿರುವ ಕಾಲದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತಿರುವ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುದು ಶ್ಲಾಘನೀಯ. ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಾನಪದ ಕಲೆಯೆಂಬುದು ಸಾಹಿತ್ಯದ ತಾಯಿ ಬೇರಾಗಿದೆ. ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕಿದ್ದು, ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೆ.ವಿ. ಮತ್ತು ಪಂಚಗಿರಿ ದತ್ತಿಯ ಅಧ್ಯಕ್ಷ ಹಾಗೂ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಹೇಳಿದರು.

ನಗರದ ಕಂದವಾರಪೇಟೆಯ ಶ್ರೀಕಾಳಿಕಾಂಬಾ ಕಮ್ಮಟೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ನೃತ್ಯ, ಕರಡಿ ಮಜಲು, ನಂದಿಕೋಲು ಕುಣಿತ, ಕೃಷ್ಣ ಪಾರಿಜಾತ ಬಯಲಾಟ, ದೊಡ್ಡಾಟ, ಯಕ್ಷಗಾನಗಳು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದು ನುಡಿದರು.

ಜಾನಪದ ಸಾಹಿತ್ಯದಲ್ಲಿ ಪಾರಂಪರಿಕ ಜ್ಞಾನ, ಜೀವನದ ಮೌಲ್ಯಗಳು, ಸಂಸ್ಕೃತಿ, ಸಂಸ್ಕಾರಗಳು ಅಡಗಿವೆ. ಜಾನಪದ ಕಲೆ ಹಾಗೂ ಕಲಾವಿದರ ಸಂರಕ್ಷಣೆಗೋಸ್ಕರವೇ ಕನ್ನಡ ಜಾನಪದ ಪರಿಷತ್ ಉದಯವಾಗಿದೆ. ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳಾಗಿ ನಮ್ಮ ಮುಂದಿನ ಪೀಳಿಗೆಗೆ ಮುಂದುವರಿಸುವುದು ಅವಶ್ಯವಾಗಿದೆ. ಜಾನಪದ ಬೆಸೆಯುವ ಕೆಲಸ ಮಾಡುತ್ತದೆ. ಪಾಶ್ಚಾತ್ಯ ಸಂಸ್ಕೃತಿ ಬೇರ್ಪಡಿಸುತ್ತದೆ. ಜನರ ಮಾತುಗಳಲ್ಲಿನ ದೈನಂದಿನ ಶಬ್ದಗಳಿಂದಲೇ ಜಾನಪದ ಉದಯವಾಗಿದ್ದು, ಜಾನಪದ ಎಂದಿಗೂ ಶ್ರೀಮಂತವಾಗಿರಬೇಕೆಂದರೆ ಎಲ್ಲರೂ ಆ ಕಲಾ ಪ್ರಕಾರಕ್ಕೆ ಮಹತ್ವ ನೀಡಬೇಕು. ಇಂದಿನ ಯುವ ಸಮೂಹ ಮೊಬೈಲ್ ಹಾಗೂ ದೂರದರ್ಶನಕ್ಕೆ ಹೆಚ್ಚು ಅವಲಂಬಿತವಾಗಿರುವ ಹಿನ್ನೆಲೆ ಜನರ ಬಳಿಯೇ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಲಾಜ್ಯೋತಿ ಸಂಸ್ಥೆಯು ವೀರಗಾಸೆ ಗಂಗಾಧರ್ ಹಾಗೂ ತಂಡದ ಮೂಲಕ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಹಿರಿಯ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಭದ್ರಯ್ಯ ಮಾತನಾಡಿ, ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿರುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ- ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆಧುನಿಕತೆ ಹೆಸರಿನಲ್ಲಿ ನಾವು ನಮ್ಮತನ ಮರೆಯುತ್ತಿರುವ ಕಾಲದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತಿರುವ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುದು ಶ್ಲಾಘನೀಯ. ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾ ತಂಡಗಳಿಂದ ವಿವಿಧ ಕಲಾ ಪ್ರದರ್ಶನಗಳು ನಡೆದವು.

ಈ ಸಂಧರ್ಭದಲ್ಲಿ ಶ್ರೀಕಾಳಿಕಾಂಬಾ ಕಮ್ಮಟೇಶ್ವರ ಸ್ವಾಮಿ ಸೇವಾ ಸಮಿತಿ ಪ್ರಕಾಶ್ ಬಾಬು, ನಗರಸಭೆ ಮಾಜಿ ಸದಸ್ಯ ಡಿ.ವಿ. ಮುನಿರಾಜು ಸೇರಿದಂತೆ ಮತ್ತಿತರರು ಇದ್ದರು.