ಸಾರಾಂಶ
ಸಿದ್ದಾಪುರ: ನಮ್ಮ ಭಾರತೀಯ ಸನಾತನ ಸಂಸ್ಕೃತಿ ದೂರ ಮಾಡಿಕೊಳ್ಳುವ ಸಂಸ್ಕೃತಿಯಲ್ಲ. ನಮ್ಮ ಮಕ್ಕಳಿಗೆ ಇದು ಉಳಿಸಿಕೊಳ್ಳಲೇಬೇಕಾದ ಸಂಸ್ಕೃತಿ ಎಂದು ತಿಳಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವಾಗಬೇಕು ಎಂದು ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಶ್ರೀ ನುಡಿದರು.ಅವರು ಶ್ರೀಮನ್ನೆಲೆಮಾವು ಮಠದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್, ಅವಿನಾಶಿ ಸಂಸ್ಥೆ, ಲಕ್ಷ್ಮೀನರಸಿಂಹ ಸಂಸ್ಕೃತಿ ಸಂಪದ ಟ್ರಸ್ಟ್ ಗಳ ಸಹಕಾರದಲ್ಲಿ ಹಮ್ಮಿಕೊಂಡ ಶ್ರೀಮಾಧವರ್ಪಣಂ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈಚೆಗಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಎಂದರೆ ಬಿಡುವ ಸಂಸ್ಕೃತಿ ಆಗುತ್ತಿದೆ. ಇದನ್ನು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ಉಳಿಸಿಕೊಳ್ಳಬೇಕು. ಒಂದು ವರ್ಷ ಕಲಿತ ಶಿಕ್ಷಣ ಮುಂದಿನ ವರ್ಷ ಮುಂದುವರಿಕೆ ಇಲ್ಲದೇ ಬದಲಾಗುವದೂ ಇದೆ. ಇದರಿಂದ ಬಿಡುವ ಸಂಸ್ಕೃತಿ ರೂಢಿ ಆಗುವಂತೆ ಆಗಿದೆ ಎಂದರು.ಒಬ್ಬ ಗುರು ಶಿಕ್ಷಣ ಕೊಡುವ ಜೊತೆಗೆ ತನಗಿಂತ ಮೀರಿದ ವ್ಯಕ್ತಿತ್ವ ರೂಪಿಸುವನು ಅಥವಾ ಇನ್ನೊಬ್ಬ ಗುರುವನ್ನೂ ಸೃಷ್ಟಿ ಮಾಡಬಲ್ಲವನು. ಕಲಿಸಿದ ಗುರುಗಳನ್ನು ಗೌರವಿಸುವ ಕರ್ಯ ಎಲ್ಲರೂ ಮಾಡಬೇಕು. ಶಿಷ್ಯರ ಏಳ್ಗೆಯನ್ನು ಸದಾ ಬಯಸಿ ಮಾರ್ಗದರ್ಶನ ಮಾಡುವವನೇ ಗುರು. ಅಂಥ ಕಾರ್ಯವನ್ನು ಜಿ.ಆರ್.ಭಾಗವತ ತ್ಯಾರಗಲ್ಲ ಅವರು ಮಾಡಿದ್ದಾರೆ ಎಂದರು.
ಪ್ರಸಿದ್ಧ ಗಾಯಕ, ಕಲಾವಿದ ಶಶಿಧರ ಕೋಟೆ ನಮ್ಮ ಸನಾತನ ಸಂಸ್ಕೃತಿ ಇರುವುದು ಭಕ್ತಿಯಲ್ಲಿ, ಪ್ರೀತಿಯಲ್ಲಿ, ನೀತಿಯಲ್ಲಿ. ಗುರುಗಳ, ಭಗವಂತನ ಸನ್ನಿಧಾನ ಬಯಸಿ ಸದ್ಭಾವನೆಯಿಂದ ಬದುಕಬೇಕು. ಸದ್ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು ಎಂದರು.ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯಾಧ್ಯಾಪಕ ಜಿ.ಆರ್.ಭಾಗವತ ಇಂಥೊದು ಸನ್ಮಾನ ಸಾರ್ಥಕ್ಯ ಮೂಡಿಸಿದೆ. ಮಕ್ಕಳ ಏಳ್ಗೆ ಎಲ್ಲ ಶಿಕ್ಷಕರ ಕನಸಾಗಬೇಕು. ಒಳಿತಾಗುವ ಕಾರ್ಯ ಮಾಡಬೇಕು ಎಂದರು.
ಬೆಂಗಳೂರಿನ ಮಧು ಮಿಲ್ಲಿಂಗ್ ಸೊಲೂಶನ್ಸನ ವ್ಯವಸ್ಥಾಪಕ ನಿರ್ದೇಶಕ ಮಧುಸೂಧನ ನೆಲೆಮಾವು ಮಠದ ಭೇಟಿ ಪುನೀತವಾಗಿಸಿದೆ ಎಂದರು.ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಸಿದ್ದಾಪುರ ತಾಲೂಕಿನ ನೆಲೆಮಾವು ಮಠದ ಶ್ರೀಗಳು ಜಿ.ಆರ್.ಭಾಗವತ ದಂಪತಿಗಳನ್ನು ಸನ್ಮಾನಿಸಿದರು.