ಜಗತ್ತಿಗೆ ಪ್ರವಾದಿ ಮಹ್ಮದರ ಕೊಡುಗೆ ದೊಡ್ಡದು. ಜಗತ್ತು ಶಾಂತಿ ಹಾಗೂ ಸೌಹಾರ್ದತೆಯಿಂದ ಸಾಗಬೇಕಾದರೆ ನಾವೆಲ್ಲರೂ ಒಂದು ಎಂದು ಬದುಕು ಕಟ್ಟಿಕೊಳ್ಳಬೇಕಿದೆ.

ಗಜೇಂದ್ರಗಡ: ಜಾತಿ ಎನ್ನುವುದು ವಿಷ, ಧರ್ಮ ಎಂಬುದು ಅಮೃತ. ಪ್ರವಾದಿ, ಸಂತರ ಆಶಯವೇ ಕೂಡಿ ಬಾಳುವುದು. ದೇಶದ ಅಸ್ಮಿತೆಯಾದ ಸೌಹಾರ್ದತೆ ಹಾಗೂ ಭಾವೈಕ್ಯತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ ತಿಳಿಸಿದರು.

ಸ್ಥಳೀಯ ಜಿ.ಎಸ್. ಪಾಟೀಲ ನಗರದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಶುಕ್ರವಾರ ನಡೆದ ಹಜರತ್ ಮುಕ್ಷಾವಲಿ ದರ್ಗಾ ಮಸೀದಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಜಗತ್ತಿಗೆ ಪ್ರವಾದಿ ಮಹ್ಮದರ ಕೊಡುಗೆ ದೊಡ್ಡದು. ಜಗತ್ತು ಶಾಂತಿ ಹಾಗೂ ಸೌಹಾರ್ದತೆಯಿಂದ ಸಾಗಬೇಕಾದರೆ ನಾವೆಲ್ಲರೂ ಒಂದು ಎಂದು ಬದುಕು ಕಟ್ಟಿಕೊಳ್ಳಬೇಕಿದೆ. ಪ್ರಾರ್ಥನಾ ಸ್ಥಳಗಳು ತಪ್ಪನ್ನು ಕ್ಷಮಿಸುವ ಹಾಗೂ ಬದುಕನ್ನು ನೆಮ್ಮದಿಯಡೆಗೆ ಸಾಗಿಸುವ ಪವಿತ್ರ ಸ್ಥಳಗಳಾಗಿವೆ. ಎಲ್ಲ ಧರ್ಮಗಳಲ್ಲಿ ಶಾಂತಿಪಾಲನೆ ಹಾಗೂ ಧರ್ಮಪಾಲನೆಯ ಪಾಠ ಅಡಗಿದೆ. ಹೀಗಾಗಿ ನಮ್ಮ ಧರ್ಮ ಪಾಲನೆಯೊಂದಿಗೆ ಇತರರ ಧರ್ಮಗಳನ್ನು ಗೌರವಿಸುವ ಮೂಲಕ ಸದೃಢ ಭಾರತದ ನಿರ್ಮಾಣಕ್ಕೆ ಮತ್ತಷ್ಟು ದಿಟ್ಟ ಹೆಜ್ಜೆಯನ್ನಿಡಬೇಕಿದೆ ಎಂದರು.

ಟಕ್ಕೇದ ದರ್ಗಾದ ನಿಜಾಮುದ್ದೀನಶಾ ಅಶ್ರಫಿ ಮಕಾನದಾರ ಮಾತನಾಡಿ, ನಮ್ಮ ತಪ್ಪುಗಳಿಗೆ ಕ್ಷಮೆ ಕೇಳುವ ಹಾಗೂ ಉತ್ತಮ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳುವ ಮಾರ್ಗ ನಮಾಜು. ನಾವೆಲ್ಲರೂ ಕೂಡಿಕೊಂಡು ಬಾಳುವ ಮೂಲಕ ಭಾವೈಕ್ಯತೆಯಿಂದ ಬದುಕು ಸಾಗಿಸೋಣ ಎಂದ ಅವರು, ಗಜೇಂದ್ರಗಡ ಸೌಹಾರ್ದತೆಗೆ ರಾಜ ಮನೆತನ ಘೋರ್ಪಡೆ ಕುಟುಂಬದ ಕೊಡುಗೆ ಅನನ್ಯ ಎಂದರು.ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸರ್ವ ಜನಾಂಗದ ಶಾಂತಿ ತೋಟವಾಗಿರುವ ದೇಶದಲ್ಲಿ ಸಾವಿರಾರು ಜಾತಿ, ಧರ್ಮಗಳು ನೆಮ್ಮದಿಯ ಜೀವನ ಕಟ್ಟಿಕೊಂಡಿವೆ. ಸರ್ವರ ಅಭಿವೃದ್ಧಿ, ಸರ್ವರಿಗೂ ಸುಖ ಶಾಂತಿ ಸಿಗಲಿ ಎಂಬುದು ಪ್ರಾರ್ಥನೆ ಎಂದರು.ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಹಸನ ತಟಗಾರ ಮಾತನಾಡಿ, ಸೌಹಾರ್ದತೆ ಸಾಕ್ಷಿಕರಿಸುವ ಹಾಗೂ ನಿದರ್ಶನವಾಗುವ ಅನೇಕರಿದ್ದಾರೆ. ಈ ದಿಸೆಯಲ್ಲಿ ಜಿ.ಎಸ್. ಪಾಟೀಲ ನಗರದಲ್ಲಿ ಗಣೇಶ ದೇವಸ್ಥಾನ ಹಾಗೂ ಮೌಲಾಲಿ ಮಸೀದಿ ನಿರ್ಮಾಣಕ್ಕೆ ಮತ್ತಿಕಟ್ಟಿ ಅವರ ಕುಟುಂಬ ಜಾಗವನ್ನು ನೀಡಿದ್ದು ಸೌಹರ್ದತೆ ಸಾಕ್ಷಿಯಾಗಿದೆ ಎಂದರು.ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಯೂಸೂಫ್ ಇಟಗಿ, ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ ಹಾಗೂ ಸುಭಾನಸಾಬ ಆರಗಿದ್ದಿ ಮಾತನಾಡಿದರು. ಮಾಜಿ ಚೇರ್ಮನ್ ಎ.ಡಿ. ಕೋಲಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸೈಯದ್ ಅಹ್ಮದ ರಾಜಾ ಸಾನ್ನಿಧ್ಯ ವಹಿಸಿದ್ದರು. ಮೌಲಾನಾಗಳಾದ ಮಹ್ಮದ ಫಾರೂಖ, ಯಾಸೀನ್ ಅಶ್ರಫಿ, ರಫೀಕ ಹಾಳಗಿ ಹಾಗೂ ಮುಖಂಡರದಾದ ಚಂಬಣ್ಣ ಚವಡಿ, ಶ್ರೀಕಾಂತ ಅವಧೂತ, ಅಪ್ಪು ಮತ್ತಿಕಟ್ಟಿ, ಬಸವರಾಜ ಬಂಕದ, ಮುರ್ತುಜಾ ಡಾಲಾಯತ್, ರಫೀಕ್ ತೋರಗಲ್, ಶ್ರೀಧರ ಬಿದರಳ್ಳಿ, ದಾದೇಸಾಬ ಬಿಸ್ತಿ, ಚಾಂದಸಾಬ ಕೊಪ್ಪಳ, ಮೌಲಾಸಾಬ ಬಳ್ಳಾರಿ, ಯಲ್ಲಪ್ಪ ಬಂಕದ, ಮುಸ್ತಾಕ ಅಹ್ಮದ ಅಕ್ಕಿ, ಭಾಷೇಸಾಬ ಮುದಗಲ್, ಫಯಾಜ್ ತೋಟದ, ಮಾರುತಿ ಕಲ್ಲೊಡ್ಡರ, ಶಾಮೀದ ಮಾಲ್ದಾರ, ರಾಜೇಸಾಬ ಸೈಯದ್, ಈಶಪ್ಪ ರಾಠೋಡ, ದಾವಲ ತಾಳಿಕೋಟಿ, ಇಮ್ರಾನ ಅತ್ತಾರ ಇತರರು ಇದ್ದರು.