ಉತ್ಸವ, ಜಯಂತಿ ಮತ್ತು ಆಚರಣೆಗಳು ಕೇವಲ ಆರಾಧನಾ ಕೇಂದ್ರಗಳಾಗದೆ, ಜನರಲ್ಲಿ ಅರಿವು ಮೂಡಿಸುವ ವೇದಿಕೆಗಳಾಗಬೇಕು.

ಹೊಸಪೇಟೆ: ಭಾಷೆಯ ಮೂಲಕ ಅರಿವಿನ ಸಂಸ್ಕೃತಿ, ಶ್ರಮ ಸಂಸ್ಕೃತಿ ಹಾಗೂ ಸಮುದಾಯಗಳ ಸಂಸ್ಕೃತಿ ಮರು ಸಂಘಟಿಸಬೇಕಿದೆ. ಕನ್ನಡ ಭಾಷೆ ಬೇರೆ ಯಾರೂ ನಾಶ ಮಾಡುತ್ತಿಲ್ಲ. ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಇತರರ ಮೇಲೆ ಹಾಕುವ ಬದಲು ನಾವೆಲ್ಲರೂ ಸಮಷ್ಟಿಯಾಗಿ ಭಾಗವಹಿಸಿ ಕನ್ನಡದ ಪ್ರಜ್ಞೆ ವಿಸ್ತರಿಸಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಕಟ್ಟಡದ ಮುಂಭಾಗದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ಸವ, ಜಯಂತಿ ಮತ್ತು ಆಚರಣೆಗಳು ಕೇವಲ ಆರಾಧನಾ ಕೇಂದ್ರಗಳಾಗದೆ, ಜನರಲ್ಲಿ ಅರಿವು ಮೂಡಿಸುವ ವೇದಿಕೆಗಳಾಗಬೇಕು. ಸಮುದಾಯಗಳ ವಿನಾಶದೊಂದಿಗೆ ಭಾಷೆಯೂ ಅವಸಾನದತ್ತ ಸಾಗುತ್ತದೆ. ಸಮುದಾಯಗಳು ಜೀವಂತವಾಗಿದ್ದಾಗ ಮಾತ್ರ ಅವುಗಳ ವೃತ್ತಿ, ಸಂಸ್ಕೃತಿ ಮತ್ತು ಬದುಕಿಗೆ ಸಂಬಂಧಿಸಿದ ಪಾರಿಭಾಷಿಕ ಪದ ಮರುಹುಟ್ಟು ಪಡೆಯುತ್ತವೆ. ಆದ್ದರಿಂದ ಕನ್ನಡ ಭಾಷೆಯು ಕೇವಲ ಭಾಷಾ ಕೇಂದ್ರಿತವಾಗದೆ, ವಿವಿಧ ಸಮುದಾಯಗಳ ಉಳಿವಿನ ಮೂಲಕ ನಿರಂತರವಾಗಿ ಹೊಸ ಪದ ಸೃಷ್ಟಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯ ಹೊರತರುವ ಪುಸ್ತಕ, ಸಂಶೋಧನಾ ಫಲಿತ ಹಾಗೂ ಪಿಎಚ್.ಡಿ.ಮಹಾಪ್ರಬಂಧ ನಾಡಿನ ಜನರು ಕುತೂಹಲದಿಂದ ನಿರೀಕ್ಷಿಸುತ್ತಾರೆ. ಕನ್ನಡ ವಿಶ್ವವಿದ್ಯಾಲಯ ತನ್ನದೇ ಆದ ಅಸ್ಮಿತೆ ಮತ್ತು ಅಸ್ತಿತ್ವ ಹೊಂದಿದ್ದು, ಆರಂಭದಿಂದಲೂ ಹಲವು ಸಮಸ್ಯೆ ಹಾಗೂ ಸವಾಲು ನಡುವೆಯೂ ಲಭ್ಯವಿರುವ ಅವಕಾಶ ಬಳಸಿಕೊಂಡು ಕನ್ನಡದ ಮಹತ್ವದ ಕೆಲಸ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಮಹತ್ವದ ಉದ್ದೇಶಗಳೊಂದಿಗೆ ಸ್ಥಾಪನೆಯಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಸ್ವಂತ ಆಂತರಿಕ ಆದಾಯದ ಮೂಲ ಇಲ್ಲ. ಆದಾಯಕ್ಕಾಗಿ ಸರ್ಕಾರದ ಅನುದಾನವನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನೆಯ ಬೆಳವಣಿಗೆಗಾಗಿ ಸರ್ಕಾರ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ನೀಡಿ ಪೋಷಿಸಬೇಕು ಎಂದು ಆಶಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಉಪಕುಲಸಚಿವ ಡಿ.ಪ್ರಭಾ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಅಧಿಕಾರಿಗಳು, ಅಧ್ಯಾಪಕರು ಹಾಗೂ ಆಡಳಿತ ಸಿಬ್ಬಂದಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಕಮಲಾಪುರದ ಎಲ್ಲ ಕನ್ನಡದ ಅಭಿಮಾನಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕನ್ನಡದ ಪರಿಚಾರಕ ಕಮಲಾಪುರದ ಮಾಳಗಿ ರಾಮಸ್ವಾಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ವಿಜಯನಗರದ ಜಿಲ್ಲಾಧ್ಯಕ್ಷ ಹೊಸಪೇಟೆಯ ಜಂಬಯ್ಯ ತಾರಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.