ಚನ್ನಪಟ್ಟಣ: ಜನಪದದ ವಿಶಿಷ್ಟ ಪ್ರಕಾರವಾದ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸಿಕೊಳ್ಳಲು ಪ್ರಜ್ಞಾವಂತ ಸಮುದಾಯ ಮುಂದಾಗಬೇಕು ಎಂದು ಲೋಕಾಯುಕ್ತ ಎಸ್ಪಿ ಡಾ. ಬಿ.ವಿ.ಸ್ನೇಹ ಕರೆ ನೀಡಿದರು

ಚನ್ನಪಟ್ಟಣ: ಜನಪದದ ವಿಶಿಷ್ಟ ಪ್ರಕಾರವಾದ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸಿಕೊಳ್ಳಲು ಪ್ರಜ್ಞಾವಂತ ಸಮುದಾಯ ಮುಂದಾಗಬೇಕು ಎಂದು ಲೋಕಾಯುಕ್ತ ಎಸ್ಪಿ ಡಾ. ಬಿ.ವಿ.ಸ್ನೇಹ ಕರೆ ನೀಡಿದರು.

ಪಟ್ಟಣದ ಬಾಲಕರ ಕಾಲೇಜಲ್ಲಿ ಮಂಡ್ಯ ಕರ್ನಾಟಕ ಸಂಘ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದೇವಿ ಮಹಾತ್ಮೆ ಮೂಡಲಪಾಯ ಯಕ್ಷಗಾನ ಪ್ರಸಂಗದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ, ಮುಂದಿನ ತಲೆಮಾರಿಗೆ ಮೂಡಲಪಾಯ ಯಕ್ಷಗಾನ ಉಳಿಸಿಕೊಡಬೇಕಿದೆ, ಈ ನಿಟ್ಟಿನಲ್ಲಿ ಕರ್ನಾಟಕ ಸಂಘ ಮಹತ್ತರ ಜವಾಬ್ದಾರಿ ಹೊತ್ತಿದೆ, ಅವರಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.

ಜಾನಪದ ವಿದ್ವಾಂಸ ಡಾ. ಚಕ್ಕರೆ ಶಿವಶಂಕರ್ ಮಾತನಾಡಿ, ಕರಾವಳಿ ಭಾಗದಲ್ಲಿರುವ ಯಕ್ಷಗಾನ ಶಿವರಾಮ ಕಾರಂತರಿಂದ ಪ್ರಸಿದ್ಧಿಯಾಯಿತು, ಆದರೆ ಮೂಡಲಪಾಯ ಯಕ್ಷಗಾನಕ್ಕೆ ಸೂಕ್ತ ವೇದಿಕೆ ಸಿಗದೆ ನೇಪಥ್ಯಕ್ಕೆ ಸರಿದಿತ್ತು, ಮೂಡಲಪಾಯ ಕಲಾ ಪ್ರಕಾರಕ್ಕೆ ಹೊಸ ರೂಪ ನೀಡುವ ಮೂಲಕ ಜಾನಪದ ವಿದ್ವಾಂಸ ಜೀಶಂಪ ಅವರು ಘನತೆ ತಂದುಕೊಟ್ಟಿದ್ದಾರೆ. ಮೂಡಲಪಾಯ ಯಕ್ಷಗಾನ ಅತ್ಯಂತ ಶ್ರೇಷ್ಠ ಜಾನಪದ ಕಲಾ ಪರಂಪರೆ 600 ವರ್ಷಗಳ ಇತಿಹಾಸ ಹೊಂದಿರುವ ಜಾತ್ಯಾತೀತ ಕಲಾ ಪರಂಪರೆ, ಬಹುತೇಕ ತಳ ಸಮುದಾಯದ ಕಲಾವಿದರು ಮೂಡಲಪಾಯ ಯಕ್ಷಗಾನ ಉಳಿಸಿಕೊಂಡು ಬಂದಿದ್ದು ಆ ಕಲೆ ಉಳಿಸಲು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ತಮ್ಮ ಸಮಯ ಮೀಸಲಿಟ್ಟಿರುವುದು ಮೂಡಲಪಾಯ ಯಕ್ಷಗಾನ ಕಲೆಗೆ ಹೊಸ ಹುರುಪು ಮೂಡಿಸಿದೆ ಎಂದು ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಪಾರ್ಸಿ ರಂಗಭೂಮಿ ಪ್ರಭಾವ ಹೆಚ್ಚು, ಇದರಿಂದಾಗಿ ನಮ್ಮ ಭಾಗದ ಜನಪದ ಕಲೆ ಮೂಡಲಪಾಯ ಯಕ್ಷಗಾನ ನೇಪಥ್ಯ ಸೇರುವಂತಾಯಿತು. ಕಂಪನಿ ನಾಟಕಗಳು ಕರಾವಳಿ ಕಡೆಗೆ ಪ್ರವೇಶ ಮಾಡಲಿಲ್ಲ. ಹೀಗಾಗಿ ಅಲ್ಲಿಯ ಪಡುವಲಪಾಯ ಯಕ್ಷಗಾನ ಕಲೆ ಜೀವಂತವಾಗಿ ಉಳಿಯಿತು. ಶಿವರಾಮ ಕಾರಂತ ಅವರಂಥವನ್ನು ದೊಡ್ಡ ಪ್ರಯೋಗ ಮಾಡಿ ಬ್ಯಾಲೆ ಮಟ್ಟಕ್ಕೂ ಕೊಂಡೊಯ್ದರು. ಇಂತಹ ಪರಿಸ್ಥಿತಿಯಲ್ಲಿ ಮೂಡಲಪಾಯಕ್ಕೆ ಮರುಜೀವ ನೀಡುವ ಅನಿವಾರ್ಯತೆ ಈಗ ನಮ್ಮ ಮುಂದಿದೆ ಎಂದರು.

ವೇದಿಕೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಪ್ರೇಕ್ಷಕರ ಮನಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಸತೀಶ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ನಿವೃತ್ತ ಪ್ರಾಂಶುಪಾಲ ಡಿ.ಪಿ.ಪುಟ್ಟಸ್ವಾಮಿಗೌಡ, ಪತ್ರಕರ್ತ ಸು.ತ. ರಾಮೇಗೌಡ, ಸಾಹಿತಿ ಸಿ.ಕೆ.ರಾಮೇಗೌಡ, ರಾಜ್ ಕಲಾ ಬಳಗದ ಅಧ್ಯಕ್ಷ ಮಂಜುನಾಥ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಂ. ಮಂಜುನಾಥ್, ಬಾಲಕರ ಪಿಯು ಕಾಲೇಜು ಪ್ರಾಂಶುಪಾಲ ರಾಮು, ಕರ್ನಾಟಕ ಸಂಘದ ಕಾರ್ಯದರ್ಶಿ ಸೋಮಶೇಖರ್ ಮುಂತಾದವರಿದ್ದರು.

ಪೊಟೋ೧೮ಸಿಪಿಟಿ೨: ಚನ್ನಪಟ್ಟಣದ ಬಾಲಕರ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ದೇವಿ ಮಹಾತ್ಮೆ ಮೂಡಲಪಾಯ ಯಕ್ಷಗಾನ ಪ್ರಸಂಗದ ವೇದಿಕೆ ಕಾರ್ಯಕ್ರಮವನ್ನು ಲೋಕಾಯುಕ್ತ ಎಸ್ಪಿ ಡಾ. ಬಿ.ವಿ.ಸ್ನೇಹ ಉದ್ಘಾಟಿಸಿದರು.