ಫುಟ್‌ ಪಾತ್‌ ಹೋಟೆಲ್‌ ನಿಲ್ಲಿಸದಿದ್ದರೆ ಕಂದಾಯ ಪಾವತಿಸುವುದಿಲ್ಲ

| Published : Mar 02 2025, 01:20 AM IST

ಫುಟ್‌ ಪಾತ್‌ ಹೋಟೆಲ್‌ ನಿಲ್ಲಿಸದಿದ್ದರೆ ಕಂದಾಯ ಪಾವತಿಸುವುದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಆರು ತಿಂಗಳಿಂದ ನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡ್‌ ಗಳಲ್ಲಿ 3 ಸಾವಿರ ಫುಟ್‌ ಪಾತ್‌ ವ್ಯಾಪಾರಿಗಳು, ಆಹಾರ ಉತ್ಪನ್ನಗಳಾದ ಫಾಸ್ಟ್‌ಫುಡ್‌, ಟಿಫನ್, ಹೋಟೆಲ್‌, ನಾನ್‌ ವೆಚ್‌, ವೆಜ್‌ ಮುಂತಾದ ಹೋಟೆಲ್‌ ತೆರೆದು ಅನಧಿಕೃತವಾಗಿ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದಲ್ಲಿ ತಲೆ ಎತ್ತುತ್ತಿರುವ ಫುಟ್‌ಪಾತ್‌ ಹೋಟೆಲ್‌ ನಿಲ್ಲಿಸದಿದ್ದರೆ ಕಂದಾಯ ಪಾವತಿಸುವುದಿಲ್ಲ ಮತ್ತು ಲೈಸೆನ್ಸ್‌ ಪಡೆಯುವುದಿಲ್ಲ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಎಚ್ಚರಿಸಿದ್ದಾರೆ.

ಆರು ತಿಂಗಳಿಂದ ನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡ್‌ ಗಳಲ್ಲಿ 3 ಸಾವಿರ ಫುಟ್‌ ಪಾತ್‌ ವ್ಯಾಪಾರಿಗಳು, ಆಹಾರ ಉತ್ಪನ್ನಗಳಾದ ಫಾಸ್ಟ್‌ಫುಡ್‌, ಟಿಫನ್, ಹೋಟೆಲ್‌, ನಾನ್‌ ವೆಚ್‌, ವೆಜ್‌ ಮುಂತಾದ ಹೋಟೆಲ್‌ ತೆರೆದು ಅನಧಿಕೃತವಾಗಿ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ನಮ್ಮ ನಿಜವಾದ ಉದ್ಯಮಿಗಳು ಎಲ್ಲಾ ರೀತಿಯ ಪರವಾನಗಿ ಪಡೆದು ಸರ್ಕಾರಕ್ಕೆ, ಸ್ಥಳೀಯ ನಗರ ಪಾಲಿಕೆ, ಕಾರ್ಮಿಕ ಇಲಾಖೆ, ಎಫ್‌ಎಸ್‌ಎಸ್‌ಎಐ ಮತ್ತಿತರ ಸಂಸ್ಥೆಗಳಲ್ಲಿ ಲೈಸೆನ್ಸ್‌ ಶುಲ್ಕ ಪಾವತಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಜಿಎಸ್‌.ಟಿ ಮತ್ತು ಆದಾಯ ತೆರಿಗೆ, ಕಂದಾಯ ಪಾವತಿಸಿ ವ್ಯಾಪಾರ ಮಾಡುತ್ತಿದ್ದೇವೆ. ಫುಟ್‌ ಪಾತ್‌ ನ ಅನಧಿಕೃತ ವ್ಯಾಪಾರಿಗಳು ಯಾವುದೇ ರೀತಿಯ ಪರವಾನಗಿ ಇಲ್ಲದೇ, ತೆರಿಗೆ ಇಲ್ಲದೇ ಈ ರೀತಿಯ ವ್ಯವಹಾರ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಅಧಿಕೃತವಾಗಿ ನಗರಪಾಲಿಕೆ ಗುರುತಿಸಿ ನೀಡಿರುವ ಸ್ಥಳಗಳನ್ನು ಹೊರತುಪಡಿಸಿ, ಅನಧಿಕೃತ ಫುಟ್‌ಪಾತ್‌ ವ್ಯಾಪಾರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಈ ಬಗ್ಗೆ ನಗರ ಪಾಲಿಕೆ ಆಯುಕ್ತರು, ಆರೋಗ್ಯಾಧಿಕಾರಿ, ಸಿಬ್ಬಂದಿ, ಉಸ್ತುವಾರಿ ಸಚಿವರು, ಶಾಸಕರು ಎಚ್ಚೆತ್ತುಕೊಳ್ಳಬೇಕು. ಅನಧಿಕೃತ ವ್ಯಾಪಾರಿಗಳಿಂದ ನಗರದ ಸೌಂದರ್ಯ ಹಾಳಾಗುತ್ತಿರುವುದನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.