20 ದಿನಗಳಲ್ಲಿ ಬರ ಪರಿಹಾರ ಬಿಡುಗಡೆ ಮಾಡದಿದ್ದರೆ ಹೋರಾಟ

| Published : May 19 2024, 01:49 AM IST

ಸಾರಾಂಶ

ರಾಜ್ಯದ ಎಲ್ಲಾ ಕೆರೆಗಳ ಹುಳು ತೆಗೆಸಿ ರೈತರ ಜಮೀನುಗಳಿಗೆ ಸರಬರಾಜು ಮಾಡಿ, ಭೂಮಿ ಫಲವತ್ತತೆಗೆ ಒತ್ತು ನೀಡಲು ಕಾರ್ಯ ಯೋಜನೆಯನ್ನು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೈಗೊಳ್ಳಬೇಕು

- ಸರ್ಕಾರಕ್ಕೆ ಕುರುಬೂರು ಎಚ್ಚರಿಕೆ

ಫೋಟೋ- 18ಎಂವೈಎಸ್10----

ಕನ್ನಡಪ್ರಭ ವಾರ್ತೆ ಮೈಸೂರು

ಬರ ಪರಿಹಾರವನ್ನು 20 ದಿನದಲ್ಲಿ ರೈತರಿಗೆ ನ್ಯಾಯಯುತವಾಗಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ಶನಿವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಬರ ಹಾಗೂ ಮಳೆ ಹಾನಿ ಬೆಳೆ ನಷ್ಟ ಪರಿಹಾರ ನ್ಯಾಯಯುತವಾಗಿ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಜಾರಿ ಮಾಡಿ, ಆ ಮೂಲಕ ವಿಮಾ ಪರಿಹಾರ ಕೊಡಿಸಲಿ. ನಾಟಕೀಯವಾಗಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಕಿಡಿಕಾರಿದರು.

ರಾಜ್ಯದ ಎಲ್ಲಾ ಕೆರೆಗಳ ಹುಳು ತೆಗೆಸಿ ರೈತರ ಜಮೀನುಗಳಿಗೆ ಸರಬರಾಜು ಮಾಡಿ, ಭೂಮಿ ಫಲವತ್ತತೆಗೆ ಒತ್ತು ನೀಡಲು ಕಾರ್ಯ ಯೋಜನೆಯನ್ನು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ. ಯಾರು ಬೆಳೆ ಬೆಳೆಯಬಾರದು ಎಂದು ಅಧಿಸೂಚನೆ ಹೊರಡಿಸಿದ ಸರ್ಕಾರ, ಈ ಭಾಗದ ಎಲ್ಲಾ ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ. ಇದೇ ಸರ್ಕಾರ ಬರಗಾಲದ ಬೆಳೆ ನಷ್ಟ ಅಂದಾಜು ಸಮೀಕ್ಷೆ ಮಾಡಿ ವರದಿ ಕಳಿಸಿ ಎಂದು ಸೂಚಿಸಿದೆ. ಈ ಕಾರಣ ಕಾವೇರಿ ಅಚ್ಚುಕಟ್ಟು ಭಾಗದ ಬಹುತೇಕ ರೈತರಿಗೆ ಬರ ಪರಿಹಾರ ನಷ್ಟ ಸಿಕ್ಕಿಲ್ಲ. ಇದು ಸರ್ಕಾರದ ಇಬ್ಬಗೆ ನೀತಿಯಾಗಿದೆ ಎಂದು ಅವರು ಆರೋಪಿಸಿದರು.

ಜಿಲ್ಲೆಯಾದ್ಯಂತ ಮಳೆ ಹಾಗೂ ಬಿರುಗಾಳಿ ಹಾನಿಯಿಂದ ರೈತರ ದನ ಕರು ಕೊಟ್ಟಿಗೆ, ಕೋಳಿ ಫಾರಂ. ಬಾಳೆ ಬೆಳೆ, ತರಕಾರಿ ಬೆಳೆ ನಾಶವಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಕೂಡಲೆ ನಷ್ಟ ಪರಿಹಾರ ಬಿಡುಗಡೆಗೊಳಿಸಬೇಕು. ನರೇಗಾದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ 3 ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ಖಾಸಗಿ ಫೈನಾನ್ಸ್ ಗಳು ಸಾಲ ವಸೂಲಾತಿಗಾಗಿ ಖಾಸಗಿ ಗೂಂಡಾಗಳ ಬಲ ಪ್ರಯೋಗ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಕಿರಗಸೂರ ಶಂಕರ್, ಉಡಿಗಾಲ ರೇವಣ್ಣ, ಬರಡನಫುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಬಿ.ಪಿ. ಪರಶಿವಮೂರ್ತಿ, ಕುರುಬೂರ್ ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ್, ದೇವನೂರು ವಿಜೇಂದ್ರ, ರಾಜೇಶ, ಸುನಿಲ್, ಅಂಬಳೆ ಮಂಜುನಾಥ, ರೂಪಾ ಮೊದಲಾದವರು ಇದ್ದರು.