ಸುಡುಗಾಡು ಸಿದ್ಧರ ಸಮಸ್ಯೆ ಆಲಿಸಿದ ಅಧ್ಯಕ್ಷೆ

| Published : Feb 20 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ: ಮರಿಮಟ್ಟಿ ಗ್ರಾಮದಲ್ಲಿನ ಸುಡುಗಾಡುಸಿದ್ಧ ಜನಾಂಗದವರ ಕಾಲೋನಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಭೇಟಿ ನೀಡಿ ಕುಂದುಕೊರತೆ ಆಲಿಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ:

ಮರಿಮಟ್ಟಿ ಗ್ರಾಮದಲ್ಲಿನ ಸುಡುಗಾಡುಸಿದ್ಧ ಜನಾಂಗದವರ ಕಾಲೋನಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಭೇಟಿ ನೀಡಿ ಕುಂದುಕೊರತೆ ಆಲಿಸಿದರು.

ಸುಡುಗಾಡುಸಿದ್ಧ ಜನಾಂಗ ಅಲೆಮಾರಿಯಾಗಿದ್ದರೂ, ಈಗ ನಾವೆಲ್ಲಾ ಒಂದೆಡೆ ನೆಲೆನಿಂತಿದ್ದೇವೆ. ಆದರೆ, ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದೇವೆ ಎಂದು ಸಮುದಾಯ ಭೀಮಾಶಂಕರ ಉದಂಡಿ ಅಳಲು ತೋಡಿಕೊಂಡರು. ಮರಿಮಟ್ಟಿಯಲ್ಲಿ ನೆಲೆನಿಂತು, ಅದು ಮುಳುಗಡೆಯಾದಾಗ ಇಲ್ಲಿ ಸ್ಥಳಾಂತರಗೊಂಡಿದ್ದೇವೆ. ಈಗ ಕುಟುಂಬಗಳು ವಿಸ್ತಾರವಾಗಿದ್ದು, ಹೊಸ ಮನೆ ಕಟ್ಟಿಕೊಳ್ಳಲು ಗ್ರಾಮದಲ್ಲಿ ನಿವೇಶನಗಳಿಲ್ಲ. ಹೀಗಾಗಿ ಚಿಮ್ಮಲಗಿ ಭಾಗ-1 ಬಿ ಪುನರ್ವಸತಿ ಕೇಂದ್ರದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್ವಸತಿ ಇಲಾಖೆ ಅಧೀನದಲ್ಲಿ ಸಾಕಷ್ಟು ನಿವೇಶನಗಳು ಖಾಲಿಯಿವೆ. ಅವುಗಳಲ್ಲಿ 60 ನಿವೇಶನಗಳನ್ನು ನಮ್ಮ ಜನಾಂಗಕ್ಕೆ ಹಂಚಬೇಕು, ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರುವ ನೀಡುವಂತೆ ಮನವಿ ಮಾಡಿದರು.ಎಸ್.ಆರ್.ವಿಭೂತಿ ಮಾತನಾಡಿ, ಗ್ರಾಮದಲ್ಲಿ ವಿದ್ಯುತ್ ಅಭಾವವಿದೆ, ಹಳೆ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿವೆ. ಕೆಪಿಟಿಸಿಎಲ್, ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ ಎಂದು ದೂರಿದರು. ಅಲ್ಲದೇ, ಆಲಮಟ್ಟಿಯ ಉದ್ಯಾನಗಳಲ್ಲಿ ಅರಣ್ಯ ಇಲಾಖೆಯ 300ಕ್ಕೂ ಅಧಿಕ ಅರಣ್ಯ ದಿನಗೂಲಿಗಳನ್ನು ನೇಮಕ ಮಾಡಿಕೊಂಡಿದ್ದು, ಅಲ್ಲಿ ಸುಡುಗಾಡು ಸಿದ್ಧ ಸಮಯದಾಯದ ಯುವಕ, ಮಹಿಳೆಯರಿಗೂ ದಿನಗೂಲಿ ಕಾರ್ಮಿಕರಾಗಿ ನೌಕರಿ ಸಿಕ್ಕರೆ ಸಮುದಾಯ ಆರ್ಥಿಕವಾಗಿ ಸದೃಢವಾಗಲಿದೆ, ಭಿಕ್ಷಾಟನೆಯಿಂದ ಮುಕ್ತವಾಗಲಿದೆ ಎಂದರು.ಮರಿಮಟ್ಟಿಯಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರಿ ಮಾಡಲು ಮನವಿ ಮಾಡಿದರು. ಸಮಸ್ಯೆ ಆಲಿಸಿದ ಪಲ್ಲವಿ.ಜಿ, ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು. ಸರ್ಕಾರ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ ಎಂದರು.ತಹಶೀಲ್ದಾರ್ ಎ.ಡಿ.ಅಮರಾವದಗಿ, ಸಮಾಜ ಕಲ್ಯಾಣ ಜಿಲ್ಲಾ ಉಪನಿರ್ದೇಶಕ ಪುಂಡಲಿಕ ಮಾನಕರ, ಬಿಇಒ ವಸಂತ ರಾಠೋಡ, ತಾಪಂ ಇಒ ವೆಂಕಟೇಶ ವಂದಾಲ, ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಲಕ್ಷ್ಮಣ ವಿಭೂತಿ, ಆನಂದ ಕುಮಾರ ಮತ್ತೀತರರು ಇದ್ದರು.