ಸಾರಾಂಶ
ಬಿ.ಜಿ.ಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಅಧಿಕಾರಿಗಳ ಹೊಣೆಗೇಡಿತನದಿಂದ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ತಾಲೂಕಿನ ಬಿಜಿಕೆರೆ
ಗ್ರಾಪಂ ಯಲ್ಲಿ ಸ್ವತಃ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಚರಂಡಿ ಸ್ವಚ್ಛತೆಗೆ ಮುಂದಾಗಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ.ಔದು ತಾಲೂಕಿನ ಎ ಗ್ರೇಡ್ ಪಂಚಾಯಿತಿಗಳಲ್ಲಿ ಒಂದಾಗಿರುವ ಬಿಜಿಕೆರೆ ಗ್ರಾಮ ಪಂಚಾಯತಿಯಲ್ಲಿ ಖಾಯಂ ಸ್ವಚ್ಛತಾ ಸಿಬ್ಬಂದಿ ಇಲ್ಲದೆ ಆನೈರ್ಮಲ್ಯಕ್ಕೆ ಕಾರಣವಾಗಿರುವ ಗ್ರಾಮದಲ್ಲಿ ಪಂಚಾಯತಿ ಅಧ್ಯಕ್ಷ ಎಸ್.ಜಯಣ್ಣ ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ.
ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಬಿಜಿಕೆರೆ ನಾಲ್ಕು ವಾರ್ಡ್ ಹೊಂದಿದೆ. ಸ್ವಚ್ಛತಾ ಸಿಬ್ಬಂದಿ ನೇಮಕ ಇಲ್ಲದೆ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಪರಿಣಾಮವಾಗಿ ಸ್ವತ ಅಧ್ಯಕ್ಷ ದಿನಗೂಲಿ ಸಿಬ್ಬಂದಿ ಜತೆಗೆ ಸ್ವಚ್ಛತೆ ಮಾಡುತ್ತಿರುವುದು ಕಳೆದೆರೆಡು ದಿನಗಳಿಂದ ಕಾಣಸಿಗುತ್ತಿದೆ.ಕಳೆದೆರಡು ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿ ಇಲ್ಲದೆ ಸಮಸ್ಯೆ ಬಿಗಡಾಯಿಸಿದೆ. ಚರಂಡಿಗಳು ಸೊರುಗುತ್ತಿವೆ. ರಸ್ತೆಗಳಲ್ಲಿ ಕಸ ತಾಂಡವಾಡುತ್ತಿದೆ. ಹೀಗಿದ್ದರೂ, ನೇಮಕಾತಿ ಮಾಡಿಕೊಳ್ಳಬೇಕಾದ ಮೇಲಾಧಿಕಾರಿಗಳು ಮೌನ ವಹಿಸಿರುವುದು ಇನ್ನಷ್ಟು ಸಮಸ್ಯೆ ಬಿಗುಡಾಯಿಸಲು ಕಾರಣವಾಗಿದೆ.
ಸೂರಮ್ಮನಹಳ್ಳಿ, ಮುತ್ತಿಗಾರಹಳ್ಳಿ, ಕಾಮಯ್ಯನಹಟ್ಟಿ, ಓಬಯ್ಯನ ಹಟ್ಟಿ, ಮೊಗಲಹಳ್ಳಿ, ರಾವಲಕುಂಟೆ ಗ್ರಾಮಗಳ ನ್ನೊಳಗೊಂಡಿದೆ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಬಿಜಿಕೆರೆ 8 ಸಾವಿರ ಹೊಂದಿದ್ದರೂ ಸೂಕ್ತ ಸಿಬ್ಬಂದಿ ಇಲ್ಲದಾಗಿದೆ.ಇಡೀ ಗ್ರಾಮ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಚರಂಡಿಗಿಳಿದು ಸ್ವಚ್ಛತೆಗೆ ಮುಂದಾಗಿರುವುದು ಆಡಳಿತ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ.
ಪಂಚಾಯತ್ ವ್ಯಾಪ್ತಿಯ ಒಟ್ಟು ಗ್ರಾಮಗಳಲ್ಲಿ 20 ಸ್ವಚ್ಛತಾ ಸಿಬ್ಬಂದಿಗಳ ಅಗತ್ಯ ಇದೆಯಾದರೂ ಕೇವಲ ಮೂರು ಖಾಯಂ ಸಿಬ್ಬಂದಿ ಇದ್ದಾರೆ. ಬಿಜಿಕೆರೆಯಲ್ಲಿ ಇರುವ ಏಕೈಕ ಸಿಬ್ಬಂದಿಯಿಂದ ಗ್ರಾಮದ 4 ವಾರ್ಡ್‌ಗಳ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ವರ್ಷಕ್ಕೊಮ್ಮೆ ಬರುವ ಹಬ್ಬ ಹರಿದಿನಗಳಲ್ಲಿ ಕೂಲಿ ಆಳುಗಳ ಮೂಲಕ ಸ್ವಚ್ಛತೆಗೆ ಮುಂದಾಗುವ ಪಂಚಾಯಿತಿ ಖಾಯಂ ಸಿಬ್ಬಂದಿ ನೇಮಕ ನೇಮಕ ಮಾಡಿಕೊಳ್ಳುವಲ್ಲಿ ನಿರ್ಲಕ್ಷ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.ಕಂಪ್ಯೂಟರ್ ಆಪರೇಟರ್, ಖಾಯಂ ಪಿಡಿಒ ಇಲ್ಲದಾಗಿದೆ. ಕಂಪ್ಯೂಟರ್ ಕೆಲಸ ನಿರ್ವಹಣೆಗೆ ಅನ್ಯರನ್ನು ಬಳಸಿಕೊಳ್ಳುವಂತ ಸ್ಥಿತಿ ಎದುರಾಗಿದೆ. ಇದರಿಂದಾಗಿ ಪಂಚಾಯಿತಿ ಆಡಳಿತ ವ್ಯವಸ್ಥೆ ನಿರ್ವಹಣೆ ಸುಗಮವಾಗಿ ಸಾಗುತ್ತಿಲ್ಲ ಎನ್ನುವ ಅಸಮದಾನ ವ್ಯಾಪಕವಾಗಿದೆ. ಇನ್ನಾದರೂ ಸಂಬಂದಿಸಿದ ಇಲಾಖೆ ತಾಲೂಕಿನ ಅತಿ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಬಿ.ಜಿ.ಕೆರೆ ಗ್ರಾಪಂಯಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.