ನೀರಿನ ಸಮಸ್ಯೆಯ ತೀವ್ರತೆಯನ್ನು ಮನಗಂಡು ಹುಲಿಮಂಗಲ ಗ್ರಾಮಪಂಚಾಯಿತಿ ಅಧ್ಯಕ್ಷೆ ಪಿಳ್ಳಮ್ಮ ಹಾಗೂ ಗ್ರಾಪಂ ಸದಸ್ಯ ಎಂ.ಗಜೇಂದ್ರ ವೈಯಕ್ತಿಕವಾಗಿ ಹೊಸದಾಗಿ 5 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ರಾಕ್ಟರ್ ಟ್ಯಾಂಕರನ್ನು ಜನರಿಗೆ ಸಮರ್ಪಿಸಿದರು.

ಬೆಂಗಳೂರು ದಕ್ಷಿಣ: ನೀರಿನ ಸಮಸ್ಯೆಯ ತೀವ್ರತೆಯನ್ನು ಮನಗಂಡು ಹುಲಿಮಂಗಲ ಗ್ರಾಮಪಂಚಾಯಿತಿ ಅಧ್ಯಕ್ಷೆ ಪಿಳ್ಳಮ್ಮ ಹಾಗೂ ಗ್ರಾಪಂ ಸದಸ್ಯ ಎಂ.ಗಜೇಂದ್ರ ವೈಯಕ್ತಿಕವಾಗಿ ಹೊಸದಾಗಿ 5 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ರಾಕ್ಟರ್ ಟ್ಯಾಂಕರನ್ನು ಜನರಿಗೆ ಸಮರ್ಪಿಸಿದರು.

ಮಾರಗೊಂಡನಹಳ್ಳಿಯಲ್ಲಿ ಉಚಿತ ನೀರಿನ ಟ್ರಾಕ್ಟರ್ ಟ್ಯಾಂಕರ್‌ಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅಧ್ಯಕ್ಷೆ ಪಿಳ್ಳಮ್ಮ, ಬೆಂಗಳೂರಿನಾದ್ಯಂತ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸಂಕಷ್ಟದ ಸಮಯದಲ್ಲಿ ಪಂಚಾಯಿತಿ ವ್ಯಾಪ್ತಿಯ ಜನರಿಗೆ ನೆರವಾಗಲು ವೈಯಕ್ತಿಕವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಸದಸ್ಯ ಎಂ.ಗಜೇಂದ್ರ ಮಾತನಾಡಿ, ಬಡವ, ಮಧ್ಯಮ ವರ್ಗದ ಜನರು ಟ್ಯಾಂಕರ್‌ ಒಂದಕ್ಕೆ ₹1200 ರಿಂದ ₹1500 ನೀಡಿ ನೀರು ಪಡೆಯಲು ದುಸ್ಸಾಹಸಪಡಬೇಕಾಗಿತ್ತು. ನೀರಿನ ಕೊರತೆ ನೀಗಿಸಲು ಉಚಿತ ಟ್ಯಾಂಕರ್ ನೀರು ಸಹಕಾರಿಯಾಗಲಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಉಪಾಧ್ಯಕ್ಷ ಮೆಹಬೂಬ್ ಷರಿಪ್, ಸದಸ್ಯರಾದ ಸೈಯದ್‌ಸಾದಿಕ್, ಆದಿಲ್ ಅಹಮದ್, ಸೈಯದ್ ಅನ್ಸಾರ್, ನಾಜಿದ್, ಶುಭಾ ಚಂದ್ರಶೇಖರ್, ರಾಮಾಂಜನೇಯ, ರಾಜಾ ಪಾಂಡೆ, ವಾಸು, ತಂಗಂ ಉಪಸ್ಥಿತರಿದ್ದರು.