ಮುಖ್ಯ) ಮಹೇಶ್ ಮರ್ಣೆ ಕಲಾಕೃತಿಗೆ ರಾಷ್ಟ್ರಪತಿಗಳ ಮೆಚ್ಚುಗೆ

| Published : Oct 28 2024, 01:02 AM IST

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ಸುಮಾರು 2.30 ಗಂಟೆ ಕಾಲ ಉರಿ ಬಿಸಿಲಿನಲ್ಲಿ ಕುಳಿತು, ಭೂತ ಕನ್ನಡಿಯನ್ನು ಸೂರ್ಯನ ಕಿರಣಗಳನ್ನು ಮರದ ಹಲಗೆಗೆ ಹಾಯಿಸಿ, ಮರವನ್ನು ಸುಟ್ಟು ರಾಷ್ಟ್ರಪತಿಗಳ ಭಾವಚಿತ್ರದ ಕಲಾಕೃತಿಯನ್ನು ರಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮರ್ಣೆ ಗ್ರಾಮದ ಕಲಾವಿದ ಮಹೇಶ್ ಮರ್ಣೆ ಅವರು ಮರದ ಹಲಗೆ ಮೇಲೆ ಭೂತಕನ್ನಡಿಯ ಶಾಖದಿಂದ ರಚಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚಿತ್ರಕ್ಕೆ ರಾಷ್ಟ್ರಪತಿ ಕಚೇರಿಯಿಂದ ಮೆಚ್ಚುಗೆ ಪತ್ರ ಬಂದಿದೆ.

ಅಶ್ವತ್ಥ ಎಲೆಯಲ್ಲಿ ಗಣ್ಯರ ಚಿತ್ರಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರಾಗಿರುವ ಮಹೇಶ್, ಈಗಾಗಲೇ ಕಲಾಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌ಗಳ ಜೊತೆಗೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಸದಾ ಹೊಸತನದ ಹುಡುಕಾಟದಲ್ಲಿರುವ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ಸುಮಾರು 2.30 ಗಂಟೆ ಕಾಲ ಉರಿ ಬಿಸಿಲಿನಲ್ಲಿ ಕುಳಿತು, ಭೂತ ಕನ್ನಡಿಯನ್ನು ಸೂರ್ಯನ ಕಿರಣಗಳನ್ನು ಮರದ ಹಲಗೆಗೆ ಹಾಯಿಸಿ, ಮರವನ್ನು ಸುಟ್ಟು ರಾಷ್ಟ್ರಪತಿಗಳ ಭಾವಚಿತ್ರದ ಕಲಾಕೃತಿಯನ್ನು ರಚಿಸಿದ್ದಾರೆ.ನಂತರ ಅದನ್ನು ‘ಸೂರ್ಯ ಚುಂಬಿಸಿದ ಕಲಾಕೃತಿ’ ಎಂದು ರಾಷ್ಟ್ರಪತಿ ಕಚೇರಿಗೆ ಕಳುಹಿಸಿದ್ದರು. ಈಗ ಕಲಾಕೃತಿಯನ್ನು ರಾಷ್ಟ್ರಪತಿಗಳು ಮೆಚ್ಚಿಕೊಂಡು ತಮ್ಮ ಕಚೇರಿಯಿಂದ ಇ-ಮೇಲ್‌ ಮೂಲಕ ಸಂದೇಶ ಕಳುಹಿಸಿದ್ದಾರೆ. ಮಹೇಶ್ ಅವರು ಮರ್ಣೆಯ ಶ್ರೀಧರ ಆಚಾರ್ಯ ಮತ್ತು ಲಲಿತಾ ದಂಪತಿಯ ಸುಪುತ್ರ.