ವೈಭವೀಕರಣ ವಿಲ್ಲದ ನೈಜ ಸುದ್ದಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಮಂಗಳೂರು: ವೈಭವೀಕರಣ ವಿಲ್ಲದ ನೈಜ ಸುದ್ದಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಅವರು ಬುಧವಾರ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ನೈಜ ಸುದ್ದಿಗಳನ್ನು ನೈಜವಾಗಿ ನೀಡಬೇಕು. ಸಮಾಜದಲ್ಲಿ ವಸ್ತು ನಿಷ್ಠರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು. ಪತ್ರಕರ್ತರು ಪಾರದರ್ಶಕ ವರದಿ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಬೇಕು ಎಂದರು.ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿ:

ಅರಣ್ಯ ಸಂರಕ್ಷಣಾಕಾರಿ ಡಾ.ವಿ. ಕರಿಕಾಲನ್ ಮಾತನಾಡಿ, ಪತ್ರಕರ್ತರು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಇದರೊಂದಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಬಲಗೊಳಿಸಲು ಸಹಕಾರ ನೀಡುತ್ತಿದ್ದಾರೆ. ಕರಾವಳಿಯ ಜನ ಸುಶಿಕ್ಷಿತರಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಗೆ ಉತ್ತಮ ಅವಕಾಶಗಳಿವೆ. ಅವುಗಳನ್ನು ಯುವ ಸಮುದಾಯ ಬಳಸಿಕೊಳ್ಳಬೇಕು ಎಂದರು.

ಗಾಸಿಪ್‌ ತಡೆ ದೊಡ್ಡ ಸವಾಲು:

ಪತ್ರಿಕಾ ದಿನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನ್ಯೂಸ್-18ನ ಪ್ರಧಾನ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ಅವರು, ಮಾಧ್ಯಮ ಇಂದು ಹೆಚ್ಚು ಟೀಕೆಗೆ ಒಳಗಾಗಿದೆ. ಸುಳ್ಳು ಸುದ್ದಿ ಪ್ರಸಾರವಾಗುತ್ತಿದೆ ಎನ್ನುವ ಆರೋಪಗಳಿದ್ದು, ಸುಳ್ಳು ಸುದ್ದಿ ತಡೆಯಲು ಪತ್ರಕರ್ತರ ಜವಾಬ್ದಾರಿ ಪ್ರಮುಖವಾಗಿದೆ. ಗಾಸಿಪ್ ತಡೆಯುವುದು ನಮ್ಮ ಎದುರು ಇರುವ ದೊಡ್ಡ ಸವಾಲು ಎಂದರು.ಧರ್ಮವನ್ನು ಆಧಾರವಾಗಿರಿಸಿ ಬರೆಯಬಾರದು. ಒಂದು ಧರ್ಮದ ಪರ ಮತ್ತೊಂದು ಧರ್ಮದ ವಿರುದ್ಧ ಬರೆಯಬಾರದು. ಪತ್ರಕರ್ತರು ಭ್ರಷ್ಟರಾಗಿರದೆ, ಪಾರದರ್ಶಕ ವರದಿಗಾರಿಕೆಗೆ ಆದ್ಯತೆ ನೀಡಬೇಕು. ಪತ್ರಿಕೋಧ್ಯಮ ಸಮಾಜದ ಕನ್ನಡಿಯಾಗಿದ್ದು, ಪತ್ರಕರ್ತರು ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಿಕಾ ವಿತರಕ ತಿಮ್ಮಪ್ಪ ಶೆಟ್ಟಿಯವರನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸನ್ಮಾನಿಸಿದರು.

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ಇದ್ದರು.

ವಿಜಯ ಕೋಟ್ಯಾನ್ ಪಡು, ಮೊಹಮ್ಮದ್‌ ಆರಿಫ್ ಪಡುಬಿದ್ರಿ ನಿರೂಪಿಸಿದರು.

----------------------