ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ

| Published : Jul 02 2024, 01:35 AM IST

ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜೆಗಳ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುವುದು ಪತ್ರಿಕೆಗಳ ಧರ್ಮ. ಸಮಾಜ ಸರಿದಾರಿಯಲ್ಲಿ ಮನ್ನಡೆಸಲು ಪತ್ರಿಕೆಗಳು ನೆರವಾಗಬೇಕು ಎಂದು ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ. ರಮೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಸ್ತುತ ದಿನಮಾನಗಳಲ್ಲಿ ಸಮಾಜಕ್ಕೆ ಹಿತವಿಲ್ಲದ ವಿಚಾರಗಳ ಸುತ್ತಲೆ ಮಾಧ್ಯಮಗಳು ಸುತ್ತುತ್ತಿದ್ದು, ಇವುಗಳನ್ನು ಮೀರಿ ಜನ ಹಿತದ ವಿಚಾರಗಳು ಆದ್ಯತೆಯಾಗಿರಲೆಂದು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಿಸಿದರು.

ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ‘ಪತ್ರಿಕಾ ದಿನಾಚರಣೆ’ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ಕೆಲ ಸಮಯಗಳಿಂದ ದೃಶ್ಯ ವಾಹಿನಿಗಳು ಒಂದು ಸಾವಿಗೆ ಸಂಬಂಧಿಸಿದ ಸಣ್ಣ ಸಣ್ಣ ವಿಚಾರಗಳಿಗೆ ಗಂಟೆಗಟ್ಟಲೆ ಸಮಯವನ್ನು ವಿನಿಯೋಗಿಸುತ್ತಿವೆ. ಇವುಗಳನ್ನು ಮೀರಿ ನಮ್ಮ ಸುತ್ತಮುತ್ತಲ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ, ನಮ್ಮಲ್ಲಿನ ಕೃಷಿ ಚಟುವಟಿಕೆ, ಹಸಿವಿನ ವಿಚಾರಗಳಿಗೆ ನಾವೇಕೆ ಆದ್ಯತೆಯನ್ನು ನೀಡುತ್ತಿಲ್ಲವೆಂದು ಅವರು ಪ್ರಶ್ನಿಸಿದರು.

ಪತ್ರಿಕಾ ದಿನಾಚರಣೆಯ ಸಂದರ್ಭ ನಮ್ಮ ಆತ್ಮಾವಲೋಕನಕ್ಕೆ ಬದಲಾಗಿ ನಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯವಾಗಿದೆ. ಅತ್ಯಂತ ಅತಿರೇಕದ ಸಂದಿಗ್ಧ ಸಂದರ್ಭದಲ್ಲಿ ನಾವಿದ್ದೇವೆಂದು ಎಚ್ಚರಿಕೆಯ ನುಡಿಗಳನ್ನಾಡಿದ ಅವರು, ಇವುಗಳ ನಡುವೆಯೂ ಕೊಡಗಿನ ಪತ್ರಿಕೋದ್ಯಮ ಇಂದಿಗೂ ಪ್ರಾಮಾಣಿಕವಾಗಿ, ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಾ. ನರೇಂದ್ರ ರೈ ದೇರ್ಲ ಮೆಚ್ಚುಗೆಯ ನುಡಿಗಳನ್ನಾಡಿದರು.

ಕೊರೋನಾ ಮಹಾಮಾರಿಯ ಅವಧಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದ್ದು, ಇಂದು ತರಗತಿಯಲ್ಲಿ ಮಕ್ಕಳು ಪಾಠ ಪ್ರವಚನಗಳನ್ನು ನಿಷ್ಠೆಯಿಂದ ಕೇಳುತ್ತಿಲ್ಲ. ಟಿವಿ ಮತ್ತು ಮೊಬೈಲ್‌ಗಳ ಪ್ರಭಾವಳಿಯಿಂದ ಮಕ್ಕಳನ್ನು ಹೊರ ತರುವ ಮೂಲಕ ಅವರನ್ನು ಮನುಷ್ಯರನ್ನಾಗಿ ಪರಿವರ್ತಿಸುವ ಅಗತ್ಯವಿದೆಯೆಂದು ಮಾರ್ಮಿಕವಾಗಿ ನುಡಿದರು.

ಸಮಾರಂಭವನ್ನು ಉದ್ಘಾಟಿಸಿದ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆ ಪತ್ರಿಕಾ ಕ್ಷೇತ್ರದ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದೆ. ಪ್ರಸ್ತುತ ಆನ್ ಲೈನ್‌ಗಳಲ್ಲು ಸುದ್ದಿಗಳು ಜನರಿಗೆ ತಲುಪಬಲ್ಲುದಾದರು, ಪತ್ರಿಕೆಯ ಓದಿನ ಸಂತೋಷ ಮತ್ತು ಅನುಭವ ಬೇರೆಯೆ ತೆರನಾದದ್ದು ಎಂದು ತಿಳಿಸಿ, ಯಾವುದೇ ಸುದ್ದಿಗಳನ್ನು ಮಾಡುವ ಸಂದರ್ಭ ಪತ್ರಕರ್ತರು ‘ಫೈ ಡಬ್ಲ್ಯು ಒನ್ ಹೆಚ್’ ಅಂದರೆ ಯಾರು, ಯಾವಾಗ, ಏನು, ಏತಕ್ಕಾಗಿ, ಎಲ್ಲಿ ಮತ್ತು ಹೇಗೆ ಎನ್ನುವ ವಿಚಾರಗಳತ್ತ ಗಮನವನ್ನು ಕೇಂದ್ರೀಕರಿಸುವುದು ಅವಶ್ಯ ಈ ಅಂಶಗಳು ಸೇರಿದಾಗ ಮಾತ್ರ ಒಂದು ಸುದ್ದಿ ರಚನೆಯಾಗುತ್ತದೆಂದು ತಿಳಿಸಿದರು.

ಅತಿಥಿ ಸ್ಥಾನದಿಂದ ಮಾತನಾಡಿದ ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾಕರಾದ ಟಿ.ಪಿ.ರಮೇಶ್ ಅವರು, ಪ್ರಜೆಗಳ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುವುದು ಪತ್ರಿಕೆಗಳ ಧರ್ಮವಾಗಿದೆ. ಸಮಾಜ ಸರಿದಾರಿಯಲ್ಲಿ ಮುನ್ನಡೆಸಲು ಪತ್ರಿಕೆಗಳು ನೆರವಾಗಬೇಕೆಂದು ಅವರು ಅಭಿಪ್ರಾಯಿಸಿದರು.

ಪ್ರಸ್ತುತ ಬಂಡವಾಳಶಾಹಿಗಳು ಪತ್ರ‍್ರಿಕೆಗಳನ್ನು ನಡೆಸುವ ಹಂತವನ್ನು ಕಾಣುತ್ತಿದ್ದು, ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆಯಲ್ಲದೆ ಪತ್ರಿಕಾ ಸ್ವಾತಂತ್ರ್ಯಕ್ಕೂ ಧಕ್ಕೆಯನ್ನುಂಟುಮಾಡುವ ಸಾಧ್ಯತೆ ಇರುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ.ಮುರಳೀಧರ್ ಮಾತನಾಡಿ, ಸಂಘದ ವತಿಯಿಂದ ಈ ಬಾರಿ ಮೂರನೇ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರವನ್ನು ಸ್ಮರಿಸಿದರು.

ಹಿರಿಯ ಪತ್ರಕರ್ತರಿಗೆ ಸನ್ಮಾನ- ಸಮಾರಂಭದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್, ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ. ರಮೇಶ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಂಟಿಕೊಪ್ಪ ವರದಿಗಾರರಾದ ಕೆ.ಹೆಚ್.ಶಿವಣ್ಣ, ಸುದ್ದಿ ಸಂಸ್ಥೆಯ ಸಂಪಾದಕರಾದ ಟಿ.ಎಲ್.ಶ್ರೀನಿವಾಸ್ ಮತ್ತು ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾದ ತೇಲಪಂಡ ಕವನ್ ಕಾರ್ಯಪ್ಪ ಅವರನ್ನು ಗೌರವಿಸಿದರು.

ಸನ್ಮಾನಿತರ ಪರವಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಮಾತನಾಡಿ, ನಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಪತ್ರಕರ್ತರು ಮುನ್ನಡೆಯುವ ಅಗತ್ಯತೆ ಇದೆ. ಒಟ್ಟಾಗಿದ್ದಾಗ ಮಾತ್ರ ಸಂತೋಷ ಮತ್ತು ಒಗ್ಗಟ್ಟು ಇರುತ್ತದೆಂದ ಅವರು, ಒಗ್ಗಟ್ಟಿದ್ದಾಗ ನಮ್ಮಲ್ಲಿನ ಯಾವುದೇ ದೌರ್ಬಲ್ಯಗಳ ಲಾಭವನ್ನು ಇತರರು ಪಡೆಯಲು ಸಾಧ್ಯವೆಲ್ಲವೆಂದು ತಿಳಿಸಿದರು.

ಸಂಘದ ಸದಸ್ಯ ರಜತ್ ರಾಜ್ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ, ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು. ಸಂಘದ ಸಲಹೆಗಾರರಾದ ಅನಿಲ್ ಎಚ್.ಟಿ. ಕಾರ್ಯಕ್ರಮವನ್ನು ನಿರೂಪಿಸಿದರೆ, ಸನ್ಮಾನಿತರ ಪರಿಚಯವನ್ನು ಸಂಘದ ಸದಸ್ಯ ರಂಜಿತ್ ಕವಲಪಾರ, ಶಿವಪ್ಪ, ಉಪಾಧ್ಯಕ್ಷ ಜಿ.ವಿ. ರವಿ ಕುಮಾರ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕುಶಾಲನಗರ ಘಟಕದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾಡಿಕೊಟ್ಟರು. ಮುಖ್ಯ ಭಾಷಣಕಾರರ ಪರಿಚಯವನ್ನು ಪಿ.ಎಂ.ರವಿ ಮಾಡಿದರು. ವಿರಾಜಪೇಟೆ ಘಟಕದ ಅಧ್ಯಕ್ಷ ಮಧೋಷ್ ಪೂವಯ್ಯ ವಂದಿಸಿದರು.