ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪತ್ರಿಕಾ ರಂಗವೂ ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಹದ್ದಿನ ಕಣ್ಣಿಡುವ ಜೊತೆಗೆ ಪ್ರತಿ ಹಂತದಲ್ಲೂ ಎಚ್ಚರಿಕೆ ಮೂಡಿಸುತ್ತಿದೆ ಎಂದು ಚನ್ನಪಟ್ಟಣದ ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನವರ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಮಲ್ಲೇಶ್ ಗುರೂಜಿ ಬಣ್ಣಿಸಿದರು.ಮಾರುತಿ ಪಾರ್ಟಿ ಹಾಲ್‌ನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪತ್ರಿಕಾ ರಂಗವು ಪ್ರಸ್ತುತ ಅಗತ್ಯಕ್ಕಿಂತಲೂ ಹೆಚ್ಚಿನ ಜವಾಬ್ಧಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಖಡ್ಗಕ್ಕಿಂತ ಹರಿತವಾದ ಬರವಣಿಗೆ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾಗುತ್ತಿದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಶ್ರೀಗಳು, ಕೃಷಿ, ಕೈಗಾರಿಕೆ, ತಂತ್ರಜ್ಞಾನ ಮತ್ತ್ಯಾವುದೇ ಕ್ಷೇತ್ರದಲ್ಲಿಯೂ ಪತ್ರಿಕಾ ರಂಗದ ಕಾರ್ಯ ಚಟುವಟಿಕೆ ಭಾಗವಹಿಸುವಿಕೆ ಇಲ್ಲದೆ ಊಹಿಸಲು ಅಸಾಧ್ಯ ಎಂದರು.ಅಭಿನಂದನೆ ಸ್ವೀಕರಿಸಿದ ರಾಣಿ ಐಶ್ವರ್ಯ ಬಿಲ್ಡರ್ಸ್ ಮುಖ್ಯಸ್ಥ ಎಚ್.ಎಲ್.ಸತೀಶ್, ಪ್ರತಿ ವ್ಯಕ್ತಿಯ ಮನೋವಿಕಾಸಕ್ಕೆ ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮದ ಪತ್ರಿಕೆಗಳು ಹೆಚ್ಚು ಒತ್ತು ನೀಡುತ್ತಿವೆ. ಇದಕ್ಕೆ ತಾವೇ ಉದಾಹರಣೆ ಎಂದು ತಿಳಿಸಿ, ಮದ್ದೂರು ತಾಲೂಕು ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣ ಸಂಬಂಧ ಸಂಸ್ಥೆ ವತಿಯಿಂದ ಒಂದು ಲಕ್ಷ ರು. ಗಳ ಅನುದಾನ ಘೋಷಿಸಿದರು.
ಇದೇ ವೇಳೆ ಹಿರಿಯ ಪತ್ರಕರ್ತ ಕಿರಣ್ ಮಾದರಹಳ್ಳಿ, ಪತ್ರಿಕಾ ವಿತರಕ ಪೂರ್ಣಚಂದ್ರ ತೇಜಸ್ವಿ, ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣಳಾದ ಎಂ.ವಿ.ಜೀವಿತ, ಹಿರಿಯರನ್ನು ಅಭಿನಂದಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ಕುಟುಂಬ ಸದಸ್ಯರಿಗೆ ಬಹುಮಾನ ವಿತರಣೆ ಮಾಡಲಾಯಿತು.ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಮು, ಕೆರಗೋಡು ಸೋಮಶೇಖರ್ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್‌ಕುಮಾರ್, ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ರವಿ ಸಾವಂದಿಪುರ, ಕೋಶಾಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ನಿರ್ದೇಶಕ ಶಿವನಂಜಯ್ಯ, ತಾಲೂಕು ಅಧ್ಯಕ್ಷ ಎಂ.ಆರ್. ಚಕ್ರಪಾಣಿ, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್ ಇತರರಿದ್ದರು.