ಸಾರಾಂಶ
ಹಿಂದುತ್ವದ ಹುನ್ನಾರ ಹತ್ತಿಕ್ಕಲು ಹಾಗೂ ಜಾತ್ಯತೀತ ರಾಷ್ಟ್ರ ನಿರ್ಮಿಸಲು ಮಾ.9ರಂದು ಸಂಜೆ 4ಕ್ಕೆ ನಗರದ ಡಾ.ಅಂಬೇಡ್ಕರ್ ವೃತ್ತದ ಮುಂಭಾಗ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗುವುದು
ಬೀದರ್: ಹಿಂದುತ್ವದ ಹುನ್ನಾರ ಹತ್ತಿಕ್ಕಲು ಹಾಗೂ ಜಾತ್ಯತೀತ ರಾಷ್ಟ್ರ ನಿರ್ಮಿಸಲು ಮಾ.9ರಂದು ಸಂಜೆ 4ಕ್ಕೆ ನಗರದ ಡಾ.ಅಂಬೇಡ್ಕರ್ ವೃತ್ತದ ಮುಂಭಾಗ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ತಿಳಿಸಿದರು.
ಮಂಗಳವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಉದ್ಘಾಟಿಸುವರು. ಸಚಿವ ಈಶ್ವರ ಖಂಡ್ರೆ, ರಹೀಮ್ ಖಾನ್, ಎಂಎಲ್‌ಸಿ ಅರವಿಂದ ಕುಮಾರ್ ಅರಳಿ, ಮಾಜಿ ಸಚಿವರಾದ ರಾಜಶೇಖರ ಪಾಟೀಲ್ ಹುಮನಾಬಾದ್, ಬಂಡೆಪ್ಪ ಕಾಶೆಂಪೂರ್ ಹಾಗೂ ಲಿಂಗಾಯತ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ಬಸವರಾಜ ಪಾಟೀಲ್ ಅವರನ್ನೊಳಗೊಂಡಂತೆ ಇನ್ನೂ ಅನೇಕರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.ಕೇಂದ್ರ ಸರ್ಕಾರ ದೇಶದ ರಾಜಕಾರಣದಲ್ಲಿ ಜಾತಿಯತೆ ಎಂಬ ವಿಷಬೆರಸಿ ನಾಗರಿಕರನ್ನು ಹಿಂದೂಕರಣಗೊಳಿಸುವ ಹೀನ ಮಟ್ಟಕ್ಕೆ ಇಳಿಯುತ್ತಿದೆ ಎಂದು ಆರೋಪಿಸಿದ ಅವರು ಮಾ.9ರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸುವಂತೆ ಅವರು ಮನವಿ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಮಾತನಾಡಿ, ಮಾ.9ರ ಸಮಾವೇಶದಲ್ಲಿ ಐದು ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಅರುಣ ಪಟೇಲ್, ಪ್ರಮುಖರಾದ ರಾಜಕುಮಾರ ವಾಗ್ಮಾರೆ, ಎಚ್.ಶಂಕರ, ರಾಜ್ಯ ಖಜಾಂಚಿ ಬಿ.ಸಿ ವಾಲಿ ಉಪಸ್ಥಿತರಿದ್ದರು. ಇದೇ ವೇಳೆ ಸಮಾವೇಶದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.