ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಬಾಗ
ಮಧ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ ವೇತನ ಹೆಚ್ಚಿಸುವಂತೆ ಸರ್ಕಾರದ ಗಮನಕ್ಕೆ ತಂದು ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಿ.ಎಂ. ಐಹೊಳೆ ಹೇಳಿದರು.ಸೋಮವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪಿಎಂ ಪೋಷಣೆ ಶಕ್ತಿ ನಿರ್ಮಾಣ ಯೋಜನೆ ಹಾಗೂ ಎನ್‌ಆರ್‌ಎಲ್‌ಎಂ ತಾಪಂ ರಾಯಬಾಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆ, ಸುರಕ್ಷತೆ ಹಾಗೂ ಮಿತವ್ಯಯ ಕುರಿತ ಕಾರ್ಯಾಗಾರ ಮತ್ತು ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರ ಮಧ್ಯಾಹ್ಮ ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿಗೆ ಸುರಕ್ಷಿತ ಮತ್ತು ಸ್ವಚ್ಛತೆಗಾಗಿ ಸಮವಸ್ತ್ರಗಳನ್ನು ನೀಡುತ್ತಿದೆ. ಅವುಗಳನ್ನು ಧರಿಸಿಕೊಂಡು ಗುಣಮಟ್ಟದ ಆಹಾರ ತಯಾರಿಸಿ ಮಕ್ಕಳಿಗೆ ಬಡಿಸಬೇಕೆಂದು ಹೇಳಿದರು.
ಅಕ್ಷರ ದಾಸೋಹ ತಾಲೂಕಾಧಿಕಾರಿ ಸುಭಾಷ ವಲ್ಯಾಪೂರ ಮಾತನಾಡಿ, ಜಿಪಂ ಸಿಇಒ ರಾಹುಲ್ ಶಿಂಧೆಯವರ ನಿರ್ದೇಶನದಂತೆ ಜಿಲ್ಲಾದ್ಯಂತ ಅಡುಗೆ ಸಿಬ್ಬಂದಿಗೆ ಸುರಕ್ಷತೆ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲು ಅಡುಗೆ ಸಮವಸ್ತ್ರ ನೀಡಲಾಗುತ್ತಿದೆ. ಅಡುಗೆ ಸಿಬ್ಬಂದಿಯ ಜವಾಬ್ದಾರಿ ಬಹಳಷ್ಟಿದ್ದು, ಅಡುಗೆಯವರು ಸಮಯ ಪ್ರಜ್ಞೆಯೊಂದಿಗೆ ಜಾಗೃತಿ ವಹಿಸಬೇಕು. ಆಹಾರವನ್ನು ಮಿತವಾಗಿ ಬಳಸಬೇಕೆಂದ ಅವರು, ಶಾಲಾ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ತಿಳಿದುಕೊಂಡು ರುಚಿ-ಶುಚಿಯಾದ ಆಹಾರ ತಯಾರಿಸಿ ಬಡಿಸಬೇಕು. ಅಡುಗೆ ಸಿಬ್ಬಂದಿಗೆ ವೇತನ ಕಡಿಮೆಯಿದ್ದು, ಅವರ ನಿವೃತ್ತಿ ನಂತರ ₹1 ಲಕ್ಷ ಇಡುಗಂಟು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.ಬಿಇಒ ಬಸವರಾಜಪ್ಪ ಆರ್., ಕೆಪಿಎಸ್ ಉಪಪ್ರಾಚಾರ್ಯ ಬಿ.ಎಂ. ಮಾಳಿ ಮಾತನಾಡಿ, ಸರ್ಕಾರ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಹಲವಾರು ಶಾಲಾ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಮಧ್ಯಾಹ್ನ ಬಿಸಿಯೂಟ, ಮೊಟ್ಟೆ, ಸೈಕಲ್, ಶೂ, ಬಟ್ಟೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಿಆರ್‌ಪಿಗಳಾದ ಆರ್.ಎಂ. ಕುರಾಡೆ, ವೈ.ಎಸ್. ಭಜಂತ್ರಿ, ಅನೀಲ ಸುತಾರ, ಶಿಕ್ಷಕ ಎಂ.ಬಿ. ಕಂಬಾರ, ಭಾರತಿ ಜೋಗನ್ನವರ, ಶಶಿಕಲಾ ನಾಯಕ, ಎಸ್.ಪಿ. ನಾಯಿಕವಾಡಿ, ಸುಧೀರ ದಿಕ್ಷೀತ, ಮಿಥನ ಕಾಂಬಳೆ, ಲಕ್ಷ್ಮೀ ಮೇತ್ರಿ ಸೇರಿ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಇದ್ದರು.