ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಭಾರತ್ ಜೋಡೋ ಯುವ ಸಂಘದ ನೋಂದಣಿ ಕಾರ್ಯವನ್ನು ಎಬಿವಿಪಿ ಸ್ವಾಗತಿಸುತ್ತದೆ. ಆದರೆ, ವಿದ್ಯಾರ್ಥಿಗಳ ಸ್ವಯಂ ಆಸಕ್ತಿಗೆ ಬದಲಾಗಿ ಒತ್ತಡ ಹೇರಿ ನೋಂದಣಿ ಮಾಡಿಸುತ್ತಿರುವುದನ್ನು ಖಂಡಿಸಲಾಗುವುದು.
ಹುಬ್ಬಳ್ಳಿ:
ಭಾರತ್ ಜೋಡೋ ಯುವ ಸಂಘದ ನೋಂದಣಿಗೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿರುವುದು ಹಾಗೂ ವಿದ್ಯಾರ್ಥಿಗಳ ಬಸ್ ಸಂಚಾರದ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೆ. 8ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ ಹೆಗಡೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಭಾರತ್ ಜೋಡೋ ಯುವ ಸಂಘದ ನೋಂದಣಿ ಕಾರ್ಯವನ್ನು ಎಬಿವಿಪಿ ಸ್ವಾಗತಿಸುತ್ತದೆ. ಆದರೆ, ವಿದ್ಯಾರ್ಥಿಗಳ ಸ್ವಯಂ ಆಸಕ್ತಿಗೆ ಬದಲಾಗಿ ಒತ್ತಡ ಹೇರಿ ನೋಂದಣಿ ಮಾಡಿಸುತ್ತಿರುವುದನ್ನು ಖಂಡಿಸಲಾಗುವುದು ಎಂದರು.
ಧಾರವಾಡದ ಕೆಲ ಸರ್ಕಾರಿ ವಸತಿ ನಿಲಯಗಳಲ್ಲಿ ನೋಂದಣಿ ಮಾಡದಿದ್ದರೆ ಊಟ ನೀಡುವುದಿಲ್ಲ ಎಂದು ವಾರ್ಡನ್‌ಗಳು ಹೇಳಿರುವ ಕುರಿತು ದೂರುಗಳು ಬಂದಿವೆ. ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಉಚಿತ ಪ್ರಯಾಣ ಮಾತ್ರ ಸಾಕೆ?
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕಲ್ಪಿಸಿರುವ ಕ್ರಮವನ್ನು ಎಬಿವಿಪಿ ಬೆಂಬಲಿಸುತ್ತದೆ. ಆದರೆ, ಕೇವಲ ಉಚಿತ ಪ್ರಯಾಣ ಹಾಗೂ ಪಾಸ್ ನೀಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್‌ಗಳ ಕೊರತೆ ಮತ್ತು ವಿಪರೀತ ಜನದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಎಬಿವಿಪಿ ಮುಖಂಡ ಸಚಿನ್ ಕುಳಗೇರಿ, ಸಂಜನಾ ಪಾಟೀಲ, ಸಿದ್ದಾರ್ಥ ಕೋರಿ ಸೇರಿದಂತೆ ಹಲವರಿದ್ದರು.