- ಶಾಸಕ ಬಿ.ದೇವೇಂದ್ರಪ್ಪಗೆ ಮಾಜಿ ಶಾಸಕ ರಾಜೇಶ್ ಒತ್ತಾಯ । ಸಮಸ್ಯೆ ಪರಿಹಾರಕ್ಕೆ ರೈತರ ಸಭೆ ಕರೆಯಿರಿ
- - -ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನಲ್ಲಿ ಪ್ರಸಕ್ತ ವರ್ಷ ತೀವ್ರ ಮಳೆ ಕೊರತೆಯಾಗಿದ್ದು, ಕೇವಲ ಶೇ.೧೦ ರಿಂದ ೧೫ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಮಳೆಯಿಲ್ಲದೇ ಕಂಗಾಲಾಗಿರುವ ತಾಲೂಕಿನ ರೈತರ ನೆರವಿಗೆ ಬರಲು ಜಗಳೂರನ್ನು ತಕ್ಷಣವೇ ‘ಬರಪೀಡಿತ ತಾಲೂಕು’ ಎಂದು ಘೋಷಿಸಲು ಸರ್ಕಾರದ ಮೇಲೆ ಶಾಸಕ ಬಿ.ದೇವೇಂದ್ರಪ್ಪ ಒತ್ತಡ ಹೇರಬೇಕು ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆಗ್ರಹಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಯನ್ನೇ ನಂಬಿ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ಸಾಲ ಮಾಡಿ ಹಣ ಖರ್ಚು ಮಾಡಿರುವ ತಾಲೂಕಿನ ಸುಮಾರು ೩೫ ಸಾವಿರ ರೈತಾಪಿ ಕುಟುಂಬಗಳು ಇವತ್ತು ಮಳೆಯಿಲ್ಲದೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಬೆಳೆವಿಮೆ ಜಾಗೃತಿ ಕೊರತೆ:
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಬೆಳೆಗಳಿಗೆ ವಿಮೆ ಪಾವತಿಸಲು ಜೂನ್ ೧೫ ರವರೆಗೆ ಸಮಯ ವಿಸ್ತರಿಸಲಾಗಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ರೈತರಲ್ಲಿ ಯಾವುದೇ ಜಾಗೃತಿ ಮೂಡಿಸುತ್ತಿಲ್ಲ. ಕಂದಾಯ ಉಪ ಗ್ರಾಮಗಳಾಗಿ ಮಾರ್ಪಟ್ಟು ಸರ್ವೆ ನಂಬರ್‌ಗಳು ಬದಲಾದ ಹಿನ್ನೆಲೆ ಅಡಕೆ ಬೆಳೆಗೆ ವಿಮೆ ಕಟ್ಟಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರು ತಕ್ಷಣವೇ ಅಧಿಕಾರಿಗಳ ಸಭೆ ಕರೆದು, ರೈತರ ಸಮಸ್ಯೆ ಆಲಿಸಬೇಕು ಹಾಗೂ ವಿಮೆ ಅವಧಿ ವಿಸ್ತರಣೆಯ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.
೩ ಕೆರೆಗಳಿಗೆ ಪ್ರತ್ಯೇಕ ಡಿಪಿಆರ್:ಜಗಳೂರು ತಾಲೂಕಿನ ೫೭ ಕೆರೆ ತುಂಬಿಸುವ ಬೃಹತ್ ಯೋಜನೆಯಲ್ಲಿ ಸಂಗೇನಹಳ್ಳಿ, ಜಮ್ಮಾಪುರ ಮತ್ತು ಬಿದರಕೆರೆ ಗ್ರಾಮಗಳ ಕೆರೆಗಳು ಕೈಬಿಟ್ಟು ಹೋಗಿರುವುದು ಬೇಸರ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಒಳಪಡುವ ಕೆರೆಗಳೆಂದು ನೆಪವೊಡ್ಡಿ ಇವುಗಳನ್ನು ಹೊರಗಿಡಲಾಗಿದೆ. ಆದರೆ ಜಗಳೂರು, ಭರಮಸಮುದ್ರ, ಹಿರೇಮಲ್ಲನಹೊಳೆ ಕೆರೆಗಳು ಅಪ್ಪರ್ ಭದ್ರಾ ಯೋಜನೆಗೆ ಒಳಪಟ್ಟಿದ್ದರೂ ೫೭ ಕೆರೆ ತುಂಬಿಸುವ ಯೋಜನೆಯಲ್ಲಿ ಸೇರ್ಪಡೆಯಾಗಿವೆ. ಶಾಸಕರು ತಕ್ಷಣವೇ ಕೈಬಿಟ್ಟಿರುವ 3 ಕೆರೆಗಳಿಗೆ ಪ್ರತ್ಯೇಕ ಡಿಪಿಆರ್ ಮಾಡಿಸಿ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಕುಂಠಿತ:ಶಾಸಕರಾಗಿ 3 ವರ್ಷಗಳು ಕಳೆದರೂ ಒಂದೇ ಒಂದು ಬಗರ್‌ಹುಕುಂ ಸಭೆ ನಡೆದಿಲ್ಲ. ತಾಪಂ ಇಒ ಕೆಂಚಪ್ಪ ಅವರಿಗೆ ಅನುದಾನ ಬಳಕೆ ಮಾಹಿತಿ ಕೇಳಿದರೂ ನೀಡುತ್ತಿಲ್ಲ. ಮಾಹಿತಿ ನೀಡದಿದ್ದರೆ ಆರ್‌ಟಿಐ ಮೂಲಕ ಪಡೆಯಲಾಗುವುದು. ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಕ್ಯಾಸೇನಹಳ್ಳಿ ಗ್ರಾಮದ ₹೩ ಕೋಟಿ ಅನುದಾನ ಏನಾಯಿತು? ತಮಲೇಹಳ್ಳಿ- ಗೌಡಗೊಂಡನಹಳ್ಳಿ ರಸ್ತೆ ಕಾಮಗಾರಿ ೩ ವರ್ಷವಾದರೂ ಮುಗಿದಿಲ್ಲ. ಗುತ್ತಿಗೆದಾರರು ಹಾಗೂ ಶಾಸಕರ ನಡುವಿನ ಒಳ ಒಪ್ಪಂದದಿಂದಾಗಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಎಲ್.ಬಿ. ಬೈರೇಶ್, ಶಿವಕುಮಾರಸ್ವಾಮಿ, ಜೆ.ವಿ. ನಾಗರಾಜ್, ಪೂಜಾರ್ ಸಿದ್ದಪ್ಪ, ಬಿದರಕೆರೆ ಇ.ಎನ್. ಪ್ರಕಾಶ್, ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.- - -
(ಕೋಟ್) ಜಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆ ಇದೆ. ಜುಲೈ ೧೨ರಂದು ನನ್ನ ಜನ್ಮದಿನವಿದ್ದು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಯಾವುದೇ ಕಾರಣಕ್ಕೂ ಅದ್ಧೂರಿಯಾಗಿ ಜನ್ಮದಿನ ಆಚರಿಸಬಾರದು. ಅದರ ಬದಲಾಗಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಿ ಸಾಂಕೇತಿಕವಾಗಿ ಜನ್ಮದಿನ ಆಚರಿಸಿ.- ಎಚ್.ಪಿ.ರಾಜೇಶ್, ಮಾಜಿ ಶಾಸಕ.
- - --10ಜೆ.ಜಿ.ಎಲ್.2: ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.